ಉತ್ತಮ ಸಾಹಿತ್ಯದಿಂದ ದೇಶಾಭಿಮಾನ ಹೆಚ್ಚಳ : ತಹಶೀಲ್ದಾರ್ ಭರತ್ ರಾಜ್

Photo of author

By vishwachetana807@gmail.com

[ಹೊಸನಗರ]: ಸಾಹಿತ್ಯವು ಮನುಷ್ಯನ ಆಂತರಿಕ ಭಾವನೆಗಳನ್ನು ಅಕ್ಷರಗಳು ಮೂಲಕ ಹೊರ ಜಗತ್ತಿಗೆ ವ್ಯಕ್ತಪಡಿಸುವ ಅತ್ಯುತ್ತಮ ಸಾಧನವಾಗಿದೆ ಎಂದು ತಹಶೀಲ್ದಾರ್ ಭರತ್ ರಾಜ್ ತಿಳಿಸಿದರು.

ಇಲ್ಲಿನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಅವರು, ಇದೇ ಎಪ್ರಿಲ್ 24ರಂದು ನಡೆಯಲಿರುವ ತಾಲೂಕು ಮಟ್ಟದ 11ನೇ ಕಸಾಪ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಸಾಹಿತ್ಯ ರಚನೆ ಹಾಗು ಓದಿನಿಂದ ಪ್ರತಿಯೊಬ್ಬರ ಮನಸ್ಸು ಪ್ರಫುಲ್ಲಗೊಳುತ್ತದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಸಾಹಿತ್ಯವು ದೇಶಭಕ್ತಿ, ದೇಶಾಭಿಮಾನ ಹೆಚ್ಚಳಕ್ಕೆ ಕಾರಣವಾಯಿತು. ಇಂತಹ ಸಾಹಿತ್ಯ ಸಮ್ಮೇಳನವು ಪ್ರತಿಭೆಗಳ ಉಗಮಕ್ಕೆ ಉತ್ತಮ ವೇದಿಕೆ ಕಲ್ಪಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಹಿತ್ಯ ಸಮ್ಮೇಳನಗಳು ನಮ್ಮ ಮುಂದಿನ ಜನಾಂಗಕ್ಕೆ ಸಾಹಿತ್ಯದ ಸದಾಶಯವನ್ನು ತಿಳಿಸುವ ಮಾರ್ಗದರ್ಶಿ ಆಗಬೇಕೆಂದು ಹಿರಿಯ ಸಾಹಿತಿ ಡಾ. ಶಾಂತರಾಮ ಪ್ರಭು ತಿಳಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಗಣೇಶ್ ಮೂರ್ತಿ ನಾಗರಕೊಡಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ನಿಕಟಪೂರ್ವ ಅಧ್ಯಕ್ಷ ಕೆ. ಇಲ್ಯಾಸ್, ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಚಂದ್ರಶೇಖರ ಶೇಟ್, ಕಾರ್ಯದರ್ಶಿ ಕೆ.ಜಿ.ನಾಗೇಶ್, ಉಪ ಕಾರ್ಯದರ್ಶಿ ಅಶ್ವಿನಿ ಪಂಡಿತ್, ಪ್ರಮುಖರಾದ ನಿವೃತ್ತ ಪ್ರಾಚಾರ್ಯ ಪ್ರೊ. ನವೀನ ಚಂದ್ರ, ನಿವೃತ್ತ ಕೃಷಿ ಅಧಿಕಾರಿ ಹೆಚ್.ಎಂ. ಸುಬ್ರಹ್ಮಣ್ಯ, ಆಹಾರ ನಿರೀಕ್ಷಕ ಬಾಲಚಂದ್ರ ಗೌಡ, ಪತ್ರಕರ್ತ ಕಂಠಿ ಸೇರಿದಂತೆ ಹಲವರು  ಉಪಸ್ಥಿತರಿದ್ದರು.

​ಸಾಹಿತ್ಯವು ಸಮಾಜದ ಕನ್ನಡಿ. ಹೊಸನಗರದಲ್ಲಿ 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಯಾಗಿರುವುದು ಸಾಹಿತ್ಯಾಸಕ್ತರಲ್ಲಿ ಸಂತಸ ತಂದಿದೆ.
​ಇಂದಿನ ಡಿಜಿಟಲ್ ಕಾಲಘಟ್ಟದಲ್ಲಿ ಯುವ ಪೀಳಿಗೆಗೆ ಸಾಹಿತ್ಯದ ಅಭಿರುಚಿ ಬೆಳೆಸುವುದು ಅವಶ್ಯಕ. ಈ ಸಮ್ಮೇಳನವು ಕೇವಲ ಆಚರಣೆಯಾಗದೆ, ಹೊಸ ಪ್ರತಿಭೆಗಳ ಉಗಮಕ್ಕೆ ಮತ್ತು ಕನ್ನಡ ನಾಡು-ನುಡಿಯ ಸಂರಕ್ಷಣೆಗೆ ಭದ್ರ ಬುನಾದಿಯಾಗಲಿ ಎಂಬುದು ನಮ್ಮ ಆಶಯ.
​ಬನ್ನಿ, ಏಪ್ರಿಲ್ 24ರಂದು ನಡೆಯುವ ಈ ಅಕ್ಷರ ಜಾತ್ರೆಯನ್ನು ಯಶಸ್ವಿಗೊಳಿಸೋಣ.

​- ಸಂಪಾದಕರು, ವಿಶ್ವಚೇತನ.ಕಾಂ

ಬರಹ: Chetandas Hosamane

Leave a Comment