ಹೊಸನಗರ ವಿಧಾನಸಭಾ ಕ್ಷೇತ್ರ ಪುನಃಸ್ಥಾಪನೆಗೆ ಮುಹೂರ್ತ – ಹೋರಾಟದ ಕಾರ್ಯಾಲಯ ಉದ್ಘಾಟಿಸಿದ ಮೂಲೆಗದ್ದೆ ಶ್ರೀಗಳು!

Photo of author

By vishwachetana807@gmail.com

ಹೊಸನಗರ: ಮಲೆನಾಡಿನ ರಾಜಕೀಯ ಅಸ್ಮಿತೆಯನ್ನು ಮರುಸ್ಥಾಪಿಸಲು ಈಗ ಭರ್ಜರಿ ತಯಾರಿ ನಡೆದಿದೆ. 2026ರ ಕ್ಷೇತ್ರ ಪುನರ್ ವಿಂಗಡಣೆಯ ಹೊಸ್ತಿಲಲ್ಲಿರುವ ಈ ಹೊತ್ತಿನಲ್ಲಿ, “ನಮ್ಮ ಕ್ಷೇತ್ರ ನಮಗೆ ಬೇಕು” ಎಂಬ ಕೂಗು ಈಗ ಜನಾಂದೋಲನವಾಗಿ ರೂಪಾಂತರಗೊಂಡಿದೆ.

ಹೋರಾಟದ ಕೇಂದ್ರಬಿಂದು: ನೂತನ ಕಾರ್ಯಾಲಯ ಲೋಕಾರ್ಪಣೆ
ಹೊಸನಗರದ ಮಾರುತಿ ಶೋ ರೂಂ ಪಕ್ಕದ ಪ್ರಿಯಾಂಕಾ ಮೊಬೈಲ್ ಕಾಂಪ್ಲೆಕ್ಸ್ ಕಟ್ಟಡದಲ್ಲಿ ‘ಹೊಸನಗರ ವಿಧಾನಸಭಾ ಕ್ಷೇತ್ರ ಪುನಃಸ್ಥಾಪನೆ ಹೋರಾಟ ಸಮಿತಿ’ಯ ನೂತನ ಕಾರ್ಯಾಲಯಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು. ಶ್ರೀ ಶ್ರೀ ಮೂಲೆಗದ್ದೆ ಅಭಿನವ ಚನ್ನಬಸವ ಮಹಾಸ್ವಾಮಿಗಳು ತಮ್ಮ ಅಮೃತಹಸ್ತದಿಂದ ದೀಪ ಬೆಳಗಿ ಕಾರ್ಯಾಲಯವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, “ಹೊಸನಗರದ ಅಭಿವೃದ್ಧಿ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಪ್ರತ್ಯೇಕ ಕ್ಷೇತ್ರ ಅನಿವಾರ್ಯ” ಎಂದು ಘೋಷಿಸಿದರು.

ಮುಖಂಡರ ಮಾತುಗಳಲ್ಲಿ ಹೋರಾಟದ ತೀವ್ರತೆ:
“ಯಾರ ಆಹ್ವಾನಕ್ಕೂ ಕಾಯಬೇಡಿ, ಇದು ನಮ್ಮೆಲ್ಲರ ಜವಾಬ್ದಾರಿ!”
ಜಿ.ಪಂ. ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಮಾತನಾಡಿ, “ಕ್ಷೇತ್ರದ ಹೋರಾಟದ ಕಾರ್ಯತಂತ್ರ ರೂಪಿಸಲು ಈ ಕಚೇರಿ ವೇದಿಕೆಯಾಗಲಿದೆ. ಪ್ರತಿ ಗ್ರಾಮ ಪಂಚಾಯಿತಿ ಹಂತದಿಂದಲೂ ಜನರು ಒಗ್ಗೂಡಬೇಕಿದೆ. ಇದು ಯಾರೋ ಒಬ್ಬರ ಕಾರ್ಯಕ್ರಮವಲ್ಲ, ನಮ್ಮ ತಾಲ್ಲೂಕಿನ ಭವಿಷ್ಯದ ಪ್ರಶ್ನೆ. ಯಾರ ಆಹ್ವಾನಕ್ಕಾಗಿ ಕಾಯುವ ಸಮಯ ಇದಲ್ಲ, ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ಜವಾಬ್ದಾರಿ ಹೊರಬೇಕಿದೆ” ಎಂದರು.

“95ರ ಹರೆಯದಲ್ಲೂ ಹೋರಾಟಕ್ಕೆ ಸಿದ್ಧ: ಇದು ನನ್ನ ಕೊನೆಯ ಆಸೆ!”
ಮಾಜಿ ಶಾಸಕ ಬಿ. ಸ್ವಾಮಿರಾವ್ ಅವರು ಅತ್ಯಂತ ಭಾವುಕರಾಗಿ ಮಾತನಾಡಿ, “ನಾನು ಪ್ರತಿನಿಧಿಸಿದ್ದ ಕ್ಷೇತ್ರವೇ ಇಲ್ಲದಿರುವುದು ಅತೀವ ನೋವು ತಂದಿದೆ. ನನ್ನ 95ರ ವಯಸ್ಸಿನಲ್ಲೂ ಹೊಸನಗರಕ್ಕಾಗಿ ಪಾದಯಾತ್ರೆ ಮಾಡಲು ಸಿದ್ಧನಿದ್ದೇನೆ. ಸಾಯುವ ಮುನ್ನ ಹೊಸನಗರ ಕ್ಷೇತ್ರವು ಮತ್ತೆ ಅಸ್ತಿತ್ವಕ್ಕೆ ಬರುವುದನ್ನು ನೋಡುವುದೇ ನನ್ನ ಜೀವನದ ಕೊನೆಯ ಆಸೆ” ಎಂದು ನುಡಿದರು. ಅವರ ಈ ಭಾವುಕ ಮಾತುಗಳಿಗೆ ಸಭೆಯಲ್ಲಿದ್ದವರೆಲ್ಲರೂ ಕ್ಷಣಕಾಲ ಮೌನಕ್ಕೆ ಶರಣಾದರು.

ಪಕ್ಷಾತೀತ ಶಕ್ತಿ ಪ್ರದರ್ಶನ: ಈ ಐತಿಹಾಸಿಕ ಸಂದರ್ಭದಲ್ಲಿ ಪ್ರಮುಖರಾದ ಎನ್.ಆರ್. ದೇವಾನಂದ, ಚಂದ್ರಮೌಳಿಗೌಡ, ಸುರೇಶ್ ಸ್ವಾಮಿರಾವ್, ಉಮೇಶ್ ಹಾಲಗದ್ದೆ, ವೀರೇಶ್ ಆಲವಳ್ಳಿ, ಎಚ್.ಬಿ. ಚಿದಂಬರ, ಸತೀಶ್, ಎ.ವಿ. ಮಲ್ಲಿಕಾರ್ಜುನ ಪೂರ್ಣೇಶ, ಶಾಂತಮೂರ್ತಿ, ಬೃಂದಾವನ ಪ್ರವೀಣ್, ಸದಾಶಿವ ಶ್ರೇಷ್ಠಿ, ಎಂ.ಪಿ. ಸುರೇಶ್ , ಎರಗಿ ಉಮೇಶ್ ವರ್ತಕ ಸಂಘದ ಅಧ್ಯಕ್ಷ ಪೂರ್ಣೇಶ್ ಮಲೆಬೈಲು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ತಾಲ್ಲೂಕು ಪಂಚಾಯತ್ ಸದಸ್ಯರು, ವರ್ತಕರ ಸಂಘ, ಸಹಕಾರಿ ಸಂಘಗಳು ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

ಮುಂದಿನ ಗುರಿ: ಏಪ್ರಿಲ್ 5 ಮತ್ತು 6ರ ಬೃಹತ್ ಪಾದಯಾತ್ರೆ
ಹೊಸ ಕಾರ್ಯಾಲಯದ ಮೂಲಕ ಈಗ ಹೋರಾಟದ ಚಟುವಟಿಕೆಗಳು ಚುರುಕುಗೊಂಡಿವೆ. ಬರುವ ಏಪ್ರಿಲ್ 5 ಮತ್ತು 6 ರಂದು ಹಮ್ಮಿಕೊಳ್ಳಲಾಗಿರುವ ಬೃಹತ್ ಪಾದಯಾತ್ರೆಯನ್ನು ಯಶಸ್ವಿಗೊಳಿಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲು ಸಮಿತಿ ನಿರ್ಧರಿಸಿದೆ.

ನಮ್ಮ ಹಕ್ಕೊತ್ತಾಯ: ಹೊಸನಗರದ ಅಭಿವೃದ್ಧಿಗೆ ಸ್ವತಂತ್ರ ನಾಯಕತ್ವದ ಅವಶ್ಯಕತೆ ಇದೆ. ಈ ನ್ಯಾಯಯುತ ಹೋರಾಟಕ್ಕೆ ಪ್ರತಿಯೊಬ್ಬ ತಾಲ್ಲೂಕಿನ ನಿವಾಸಿ ಕೈಜೋಡಿಸಬೇಕಿದೆ. ವಿಶ್ವಚೇತನ ಸದಾ ಜನರ ಈ ಸ್ವಾಭಿಮಾನದ ಪರವಾಗಿ ನಿಲ್ಲಲಿದೆ.

ಬರಹ: ತಂಡ, vishwachetana.com

Leave a Comment