ಹೊಸನಗರದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣ: ಸರ್ಕಾರ–ಪೊಲೀಸರ ನಡೆಗೆ ಬಿ.ವೈ. ರಾಘವೇಂದ್ರ ತೀವ್ರ ಖಂಡನೆ

Photo of author

By vishwachetana807@gmail.com

ಸ್ಥಳೀಯ ಶಾಸಕರ ಸೂಚನೆಯಂತೆ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸುತ್ತಿದೆ – ಬಿಜೆಪಿ ಎಂದಿಗೂ ಹೆದರುವುದಿಲ್ಲ ಎಂದು ಸಂಸದ ಸ್ಪಷ್ಟನೆ

ಹೊಸನಗರದಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕರ ಅಣತಿಯಂತೆ ಬಿಜೆಪಿ ಸ್ವಾಭಿಮಾನಿ ಕಾರ್ಯಕರ್ತರಿಗೆ ತೊಂದರೆ ನೀಡುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಮುಂದೆ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾಸಕರ ಮಾತನ್ನು ಕೇಳಿ ನಮ್ಮ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವುದು ನ್ಯಾಯಸಮ್ಮತವಾಗಿ ದುಡಿದು ಬದುಕು ಕಟ್ಟಿಕೊಂಡಿರುವ ಕಾರ್ಯಕರ್ತರಿಗೆ ಅನ್ಯಾಯ ಮಾಡುವಂತದ್ದು ಎಂದು ಹೇಳಿದರು. ವಿರೋಧ ಪಕ್ಷವನ್ನು ಹೆದರಿಸುವ ಉದ್ದೇಶದಿಂದ ಇಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಂತಹ ದಬ್ಬಾಳಿಕೆಗೆ ಬಿಜೆಪಿ ಪಕ್ಷವಾಗಲಿ, ಕಾರ್ಯಕರ್ತರಾಗಲಿ ಎಂದಿಗೂ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹೊಸನಗರದಲ್ಲಿ ಹಿಂದೆ ನಡೆದ ಅನೇಕ ಅಭಿವೃದ್ಧಿ ಕಾರ್ಯಗಳ ಹಿಂದೆ ಬಿಜೆಪಿ ಕಾರ್ಯಕರ್ತರ ಶ್ರಮವಿದೆ. ಅವರ ಆಶೀರ್ವಾದದಿಂದ ಸನ್ಮಾನ್ಯ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದರು. ಶಾಸಕರಾದ ಅರಗ ಜ್ಞಾನೇಂದ್ರ, ಹರತಾಳು ಹಾಲಪ್ಪ ಹಾಗೂ ಹಿಂದೆ ನಮ್ಮ ಪಕ್ಷದಲ್ಲಿದ್ದ ಶಾಸಕರ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಅವರು ಪಕ್ಷ ಬಿಟ್ಟ ಬಳಿಕವೂ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಅಡ್ಡಿ ಬಾರದಂತೆ ನೋಡಿಕೊಂಡಿದ್ದೇವೆ. ಆ ಅಭಿವೃದ್ಧಿಯ ಹಿಂದೆ ದುಡಿದವರು ನಮ್ಮ ಪಕ್ಷದ ಕಾರ್ಯಕರ್ತರೇ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಗೃಹ ಸಚಿವರಾಗಿದ್ದ ಅರಗ ಜ್ಞಾನೇಂದ್ರ ಹಾಗೂ ಶಾಸಕರಾಗಿದ್ದ ಹರತಾಳು ಹಾಲಪ್ಪ ಅವರು ಎಂದಿಗೂ ಪೊಲೀಸ್ ಇಲಾಖೆ ಅಥವಾ ಯಾವುದೇ ಇಲಾಖೆಯನ್ನು ದುರುಪಯೋಗಪಡಿಸಿಕೊಂಡಿಲ್ಲ. ಆದರೆ ಇಂದು ಸ್ಥಳೀಯ ಶಾಸಕರು ಅದೇ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕಾರ್ಯಕರ್ತರ ಮೇಲೆ ದಾಖಲಾದ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಕಾರ್ಯಕರ್ತರನ್ನ ಗುರಿಯಾಗಿಸಿ ಪ್ರಕರಣ ದಾಖಲಿಸಲಾಗಿದೆ – ಹರತಾಳು ಹಾಲಪ್ಪ ಆರೋಪ

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ, ಇತ್ತೀಚೆಗೆ ಬಿಜೆಪಿ ಕಾರ್ಯಕರ್ತರ ಮೇಲೆ ದಾಖಲಾದ ಪ್ರಕರಣಗಳು ಪೂರ್ವ ನಿಯೋಜಿತವಾಗಿದ್ದು, ಬಿಜೆಪಿ ಕಾರ್ಯಕರ್ತರನ್ನ ಗುರಿಯಾಗಿಸಿ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕರು ಹಾಗೂ ಅವರ ಆಪ್ತರ ನೇರ ಹಸ್ತಕ್ಷೇಪವಿದೆ. ಅವರ ಸೂಚನೆಯಂತೆ ಪೊಲೀಸ್ ಇಲಾಖೆ ಪ್ರಕರಣಗಳನ್ನು ದಾಖಲಿಸಿದೆ ಎಂದು ಆರೋಪಿಸಿದರು.

ಈ ಪ್ರಕರಣಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕು ಮತ್ತು ಸತ್ಯ ಸತ್ಯತೆ ಹೊರಬರಬೇಕು. ಸಾಗರ ಹಾಗೂ ಹೊಸನಗರ ಭಾಗಗಳಲ್ಲಿ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಇದನ್ನು ಪಕ್ಷ ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದರು.

ಹೊಸನಗರದಲ್ಲಿ ವಿದ್ಯುತ್ ಸಮಸ್ಯೆ, ಬಗರ್ ಕುಂ ರೈತರ ಸಮಸ್ಯೆ ಸೇರಿದಂತೆ ಹಲವು ಜನಸಾಮಾನ್ಯರ ಸಮಸ್ಯೆಗಳು ಬಾಕಿಯಿರುವಾಗ ಅವುಗಳನ್ನು ಪರಿಹರಿಸುವ ಬದಲು ಸ್ಥಳೀಯ ಶಾಸಕರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಇಲ್ಲಿನ ಅಧಿಕಾರಿಗಳು ಶಾಸಕರ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದು, ಇಂತಹ ದುರುಪಾಲನೆಯನ್ನು ಹಿಂದೆ ಎಂದಿಗೂ ಕಂಡಿಲ್ಲ ಎಂದು ಹರತಾಳು ಹಾಲಪ್ಪ ಕಿಡಿಕಾರಿದರು. ಸೂಕ್ತ ತನಿಖೆ ಪೂರ್ಣಗೊಳ್ಳುವವರೆಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.

ಶಿವಮೊಗ್ಗ ಶಾಸಕರಾದ ಚನ್ನಬಸಪ್ಪ,ಶಾಸಕರಾದ ಅರಗ ಜ್ಞಾನೇಂದ್ರ, ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಬಿಜೆಪಿ ತಾಲೂಕು ಅಧ್ಯಕ್ಷರಾದ ಸತೀಶ್, ಟಿ.ಡಿ. ಮೇಘರಾಜ್, ಎಂ.ಎನ್. ಸುಧಾಕರ್,ಉಮೇಶ್ ಕಂಚುಗಾರ್, ಪದ್ಮಿನಿ ರಾವ್,  ಹಾಲಗದ್ದೆ ಉಮೇಶ್, ಆರ್.ಟಿ. ಗೋಪಾಲ್,  ಸುರೇಶ್ ಸ್ವಾಮಿರಾವ್ ,ವೀರೇಶ್ ಅಲವಳ್ಳಿ ಸೇರಿದಂತೆ ಹಲವರು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

Leave a Comment