ಹೊಸನಗರ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಕಲ್ಲು ಜಾರಿ ಬಿದ್ದು ಕೃಷಿಕ ಸಾವು; ದಕ್ಷ ತಂತ್ರಜ್ಞ ಸತೀಶ್ ನಿಧನಕ್ಕೆ ಗಣ್ಯರ ಸಂತಾಪ

Photo of author

By vishwachetana807@gmail.com

ಹೊಸನಗರ |ಬ್ರಹ್ಮೇಶ್ವರ|

ಹೊಸನಗರ: ತಾಲ್ಲೂಕಿನ ಮಸಗಲಿ ಗ್ರಾಮದಲ್ಲಿ ಸಂಭವಿಸಿದ ಆಕಸ್ಮಿಕ ದುರಂತದಲ್ಲಿ ಬ್ರಹ್ಮೇಶ್ವರ ನಿವಾಸಿ ಸತೀಶ್ (35) ಮೃತಪಟ್ಟಿದ್ದು, ಈ ಭಾಗದ ಒಬ್ಬ ದಕ್ಷ ಮತ್ತು ಪ್ರಾಮಾಣಿಕ ತಂತ್ರಜ್ಞನನ್ನು ಕಳೆದುಕೊಂಡಂತಾಗಿದೆ.

ಸೇವೆಯೇ ಉಸಿರಾಗಿದ್ದ ಸತೀಶ್:
ಮೃತ ಸತೀಶ್ ಅವರು ಕಳೆದ ಅನೇಕ ವರ್ಷಗಳಿಂದ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಮೋಟಾರ್ ರಿವೈಂಡಿಂಗ್ ಮತ್ತು ವಿದ್ಯುತ್‌ಗೆ ಸಂಬಂಧಪಟ್ಟ ಕೆಲಸಗಳನ್ನು ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದ್ದರು. ಈ ಭಾಗದ ರೈತರ ಪಂಪ್‌ಸೆಟ್ ಮೋಟಾರ್‌ಗಳು ಕೆಟ್ಟಾಗ ತಕ್ಷಣವೇ ಸ್ಪಂದಿಸಿ ರಿಪೇರಿ ಮಾಡಿಕೊಡುತ್ತಾ ರೈತಮಿತ್ರನಂತಿದ್ದರು. ಕುಡಿಯುವ ನೀರಿನ ಪೂರೈಕೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಾದಾಗ ಹಗಲಿರುಳು ಶ್ರಮಿಸಿ ಸರಿಪಡಿಸುತ್ತಿದ್ದ ಅವರ ಕಾರ್ಯವೈಖರಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿತ್ತು.

ಗಣ್ಯರಿಂದ ಸಂತಾಪ: ಸತೀಶ್ ಅವರ ಅಕಾಲಿಕ ನಿಧನದ ಸುದ್ದಿ ತಿಳಿಯುತ್ತಿದ್ದಂತೆ, ಸ್ಥಳೀಯ ಶಾಸಕರು, ಪಂಚಾಯ್ತಿ ಅಧ್ಯಕ್ಷರು ಹಾಗೂ ಪಂಚಾಯ್ತಿ ಸದಸ್ಯರು ಸೇರಿದಂತೆ ಸ್ಥಳೀಯ ಮುಖಂಡರುಗಳು ತೀವ್ರ ಸಂತಾಪ ಸೂಚಿಸಿದ್ದಾರೆ. “ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ಒಬ್ಬ ಯುವಕನನ್ನು ಕಳೆದುಕೊಂಡಿರುವುದು ಈ ಭಾಗಕ್ಕೆ ತುಂಬಲಾರದ ನಷ್ಟ,” ಎಂದು ಗಣ್ಯರು ಕಂಬನಿ ಮಿಡಿದಿದ್ದಾರೆ.

ಘಟನೆಯ ವಿವರ: ಬುಧವಾರ ಬೆಳಿಗ್ಗೆ 11:30ರ ಸುಮಾರಿಗೆ ಮಸಗಲಿ ಗ್ರಾಮದ ಸರ್ವೆ ನಂಬರ್ 16ರಲ್ಲಿರುವ ತಮ್ಮ ಜಮೀನಿನ ಪಕ್ಕದಲ್ಲಿ ತೋಟಕ್ಕೆ ನೀರಿನ ವ್ಯವಸ್ಥೆ ಮಾಡಲು ಧರೆಯ ಕೆಳಭಾಗದಲ್ಲಿ ಗುಂಡಿ ತೆಗೆಯುವ ವೇಳೆ, ಮೇಲ್ಭಾಗದಲ್ಲಿದ್ದ ದೊಡ್ಡ ಗಾತ್ರದ ಕಲ್ಲು ಆಕಸ್ಮಿಕವಾಗಿ ಜಾರಿ ಮೈಮೇಲೆ ಬಿದ್ದಿದೆ. ಕಲ್ಲಿನ ಹೊಡೆತಕ್ಕೆ ಸಿಲುಕಿದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಹೊಸನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಡೀ ಗ್ರಾಮವೇ ಕಂಬನಿಯಲ್ಲಿ ಮುಳುಗಿದೆ.

ಭಾವಪೂರ್ಣ ಶ್ರದ್ಧಾಂಜಲಿ
“ತಮ್ಮ ನಿಷ್ಠಾವಂತ ಸೇವೆಯ ಮೂಲಕ ಈ ಭಾಗದ ಜನರ ಮನಗೆದ್ದಿದ್ದ ಯುವ ಕೃಷಿಕ ಹಾಗೂ ತಾಂತ್ರಿಕ ಚತುರ ಸತೀಶ್ ಬ್ರಹ್ಮೇಶ್ವರ ಅವರ ಅಕಾಲಿಕ ಅಗಲಿಕೆಗೆ ‘ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ಅಸೋಸಿಯೇಷನ್ ಹೊಸನಗರ’ ಮತ್ತು ಅವರ ಸಮಸ್ತ ಸ್ನೇಹಿತ ಬಳಗವು ಆಳವಾದ ಸಂತಾಪವನ್ನು ಸೂಚಿಸುತ್ತದೆ. ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ.”
ಶೋಕತಪ್ತರು:ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ಅಸೋಸಿಯೇಷನ್ ಹೊಸನಗರ.
ಸಮಸ್ತ ಸ್ನೇಹಿತರು ಮತ್ತು ಗ್ರಾಮಸ್ಥರು.

Leave a Comment