
ಹೊಸನಗರ: ತಾಲೂಕಿನ ಹುಲಿಕಲ್ ಘಾಟ್‌ನಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದ ವೇಳೆ ಸಂಭವಿಸಿದ ಭೀಕರ ಭೂಕುಸಿತದಲ್ಲಿ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘೋರ ದುರಂತ ಇಂದು ಸಂಜೆ ಸಂಭವಿಸಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪ್ರಮುಖ ಸಂಪರ್ಕ ಕೊಂಡಿಯಾದ ಹುಲಿಕಲ್ ಘಾಟ್‌ನಲ್ಲಿ ಕಳೆದ ಕೆಲವು ದಿನಗಳಿಂದ ರಸ್ತೆ ಅಗಲೀಕರಣ ಮತ್ತು ತಡೆಗೋಡೆ (Retaining Wall) ನಿರ್ಮಾಣದ ಕೆಲಸ ಸಾಗುತ್ತಿತ್ತು. ಇಂದು ಸಂಜೆ ಸುಮಾರು 6:00 ಗಂಟೆಯ ಸುಮಾರಿಗೆ ಕಾರ್ಮಿಕರು ಹೇರ್‌ಪಿನ್ ತಿರುವಿನ ಬಳಿ ಕೆಲಸ ಮಾಡುತ್ತಿದ್ದಾಗ, ದರೆ ಮೇಲ್ಬಾಗದಿಂದ ಭಾರಿ ಪ್ರಮಾಣದ ಮಣ್ಣು ಮತ್ತು ಕಲ್ಲುಗಳು ದಿಢೀರನೆ ಕುಸಿದು ಬಿದ್ದಿವೆ.

ಈ ವೇಳೆ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ. ಈ ದುರ್ಘಟನೆಯಲ್ಲಿ ಹೊಸನಗರದ ನಗರ ರಾಘವೇಂದ್ರ (37) ಸೇರಿದಂತೆ ನಾಲ್ವರು ಕಾರ್ಮಿಕರು ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಕಾರ್ಮಿಕನ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಆಂಬುಲೆನ್ಸ್ ಧಾವಿಸಿವೆ. ಸ್ಥಳೀಯರ ನೆರವಿನೊಂದಿಗೆ ಜೆಸಿಬಿ ಯಂತ್ರ ಬಳಸಿ ಮಣ್ಣು ತೆರವುಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಕಾಮಗಾರಿ ನಡೆಯುವ ಸ್ಥಳದಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದ ಕಾರಣ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡುವ ನಿರೀಕ್ಷೆಯಿದೆ. ಈ ಭೀಕರ ಅಪಘಾತದಿಂದಾಗಿ ಹುಲಿಕಲ್ ಘಾಟ್ ಮಾರ್ಗದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಪೊಲೀಸರು ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಪರ್ಯಾಯ ಮಾರ್ಗಗಳ ಮೂಲಕ ತಿರುಗಿಸುತ್ತಿದ್ದಾರೆ ಮತ್ತು ಸುಗಮ ಸಂಚಾರಕ್ಕೆ ಅಗತ್ಯ ವ್ಯವಸ್ಥೆ ಮಾಡುತ್ತಿದ್ದಾರೆ.
ಈ ದುರಂತಕ್ಕೆ ನಿಖರ ಕಾರಣವೇನು? ಸುರಕ್ಷತಾ ಲೋಪಗಳಿಗಾಗಿ ಯಾರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ? ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಸಿಗಲಿದೆಯೇ? ಎಂಬ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ನೀಡಬೇಕಿದೆ..
ಬರಹ: Chetandas Hosamane









