
ಹೊಸನಗರ: “ಕಾರ್ಮಿಕರು ತುರ್ತು ಸಂದರ್ಭಗಳಲ್ಲಿ ಹಣಕ್ಕಾಗಿ ಪರದಾಡುವುದನ್ನು ತಪ್ಪಿಸಲು ಮತ್ತು ಆರ್ಥಿಕ ಸಬಲತೆಗಾಗಿ ಸಂಘಟನೆಯ ವತಿಯಿಂದಲೇ ಪ್ರತ್ಯೇಕ ‘ಕಾರ್ಮಿಕರ ಸಹಕಾರಿ ಬ್ಯಾಂಕ್’ ಸ್ಥಾಪಿಸುವ ಅಗತ್ಯವಿದೆ,” ಎಂದು ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ಸಂಜಯ್ ಕುಮಾರ್ ಅವರು ತಿಳಿಸಿದರು.
ತಾಲ್ಲೂಕಿನ ಹೊಸನಗರ ಗ್ರಾಮಾಂತರದ ಬಟ್ಟೆ ಮಲ್ಲಪ್ಪ ಘಟಕದ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಒಬ್ಬ ಕಾರ್ಮಿಕನಿಗೆ ಇನ್ನೊಬ್ಬ ಕಾರ್ಮಿಕ ಬೆಂಬಲ:
ಕಾರ್ಮಿಕರು ತಮ್ಮ ಕಷ್ಟಕಾಲದಲ್ಲಿ ಬಂಗಾರ ಅಥವಾ ವಾಹನಗಳನ್ನು ಅಡವಿಟ್ಟು ಸಾಲ ಪಡೆಯುವ ಪರಿಸ್ಥಿತಿ ಇದೆ. ಇದನ್ನು ತಪ್ಪಿಸಲು ‘ಒಬ್ಬ ಕಾರ್ಮಿಕನಿಗೆ ಇನ್ನೊಬ್ಬ ಕಾರ್ಮಿಕ ಬೆಂಬಲ’ ಎಂಬ ತತ್ವದಡಿ ಬ್ಯಾಂಕ್ ಸ್ಥಾಪನೆಯಾಗಬೇಕು. ಹೊಸನಗರ ಭಾಗದಲ್ಲಿ ಮಹಮ್ಮದ್ ಹುಸೇನ್ ಅವರ ನೇತೃತ್ವದಲ್ಲಿ ರೈತರು, ಟೇಲರ್‌ಗಳು, ಮೆಕಾನಿಕ್‌ಗಳು ಸೇರಿದಂತೆ ಎಲ್ಲಾ ವರ್ಗದ ಅಸಂಘಟಿತ ಕಾರ್ಮಿಕರನ್ನು ಒಗ್ಗೂಡಿಸುವ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು.

ಸಮಾಜಮುಖಿ ಕಾರ್ಯಗಳು:
ಸಂಘಟನೆಯು ಕೇವಲ ಕಾರ್ಮಿಕರ ಹಕ್ಕುಗಳಿಗೆ ಮಾತ್ರ ಸೀಮಿತವಾಗದೆ, ಈಗಾಗಲೇ 550 ಅಂಗವಿಕಲ ಮಕ್ಕಳಿಗೆ ಬೆಡ್‌ಶೀಟ್ ಹಾಗೂ ಶಾಲಾ ಬ್ಯಾಗ್‌ಗಳನ್ನು ವಿತರಿಸಿದೆ. ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಅನೇಕ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದೆ. ಅಪಘಾತಕ್ಕೀಡಾದ ಕಾರ್ಮಿಕರಿಗೆ ಲೇಬರ್ ಕಾರ್ಡ್ ಮೂಲಕ ಮತ್ತು ಲೇಬರ್ ಕಾರ್ಡ್ ಇಲ್ಲದವರಿಗೂ ಮಾನವೀಯ ನೆಲೆಯಲ್ಲಿ ನೆರವು ನೀಡಲಾಗುತ್ತಿದೆ ಎಂದರು.
ನಕಲಿ ಕಾರ್ಡ್‌ಗಳಿಗೆ ಬ್ರೇಕ್:
“ಪ್ರತಿಯೊಬ್ಬ ನೈಜ ಕಾರ್ಮಿಕರೂ ಲೇಬರ್ ಕಾರ್ಡ್ ಮಾಡಿಸಿಕೊಳ್ಳುವುದು ಅನಿವಾರ್ಯ. ಹಿಂದೆ ಇದ್ದ ನಕಲಿ ಕಾರ್ಡ್‌ಗಳನ್ನು ಪತ್ತೆಹಚ್ಚಿ ತೆರವುಗೊಳಿಸಲಾಗಿದ್ದು, ಈಗ ಕೇವಲ ಅರ್ಹ ಕಾರ್ಮಿಕರ ಕಾರ್ಡ್‌ಗಳನ್ನು ಮಾತ್ರ ನವೀಕರಿಸಲಾಗುತ್ತಿದೆ. ಕಾರ್ಮಿಕರು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆಯಬೇಕು,” ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಕೃಷ್ಣಪ್ಪ ಆರ್. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾರ್ಯದರ್ಶಿ ಸುಂದರ್ ಬಾಬು, ಜಿಲ್ಲಾ ಗೌರವಾಧ್ಯಕ್ಷ ಮಹಾದೇವ ಆಚಾರ್, ಹೊಸನಗರ ಗ್ರಾಮಾಂತರ ಅಧ್ಯಕ್ಷ ಮಹಮ್ಮದ್ ಹುಸೇನ್, ಉಪಾಧ್ಯಕ್ಷ ಶಂಕರಾಚಾರ್ಯ ಕೆ., ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಬಿ.ಎನ್. ಉಪಸ್ಥಿತರಿದ್ದರು.

ಘಟಕದ ಪ್ರಧಾನ ಕಾರ್ಯದರ್ಶಿ ದಾಮೋದರ ಎಸ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಶೇಖರ್ ಎಸ್.ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಅಫ್ರೋಜ್ ವಾರ್ಷಿಕ ವರದಿ ವಾಚಿಸಿದರು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಮತ್ತು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಘಟಕದ ಪದಾಧಿಕಾರಿಗಳಾದ ಗಣೇಶ್ ಮೂರ್ತಿ, ವಿಶ್ವನಾಥ್, ಶ್ರೀಕಾಂತ್, ಸಮೀರ್ ಅಹಮದ್, ಶಮಿಉಲ್ಲಾ ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿದ್ದರು.
ಬರಹ: Chetandas Hosamane









