ಸ್ವಚ್ಛತೆ, ಭದ್ರತೆ, ಕುಡಿಯುವ ನೀರು ಹಾಗೂ ಆರೋಗ್ಯ ಸೇವೆಗಳಿಗೆ ವಿಶೇಷ ಗಮನ ನೀಡಲು ಅಧಿಕಾರಿಗಳಿಗೆ ಸೂಚನೆ
ಹೊಸನಗರ:ಜನವರಿ 20ರಿಂದ ಆರಂಭವಾಗಲಿರುವ ಹೊಸನಗರದ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಲು ಎಲ್ಲ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸೂಚಿಸಿದರು.

ಮಂಗಳವಾರ ಪಟ್ಟಣ ಪಂಚಾಯತ್ ಆವರಣದಲ್ಲಿ ಜಾತ್ರಾ ಮಹೋತ್ಸವದ ಕುರಿತು ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಜಾತ್ರೆಯ ಯಶಸ್ಸಿಗೆ ಯಾವುದೇ ಅಡಚಣೆ ಆಗದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಹೇಳಿದರು.


ಪಟ್ಟಣ ಪಂಚಾಯತ್ ವ್ಯಾಪ್ತಿಯ 11 ವಾರ್ಡ್‌ಗಳಲ್ಲಿನ ಸ್ವಚ್ಛತಾ ಕಾರ್ಯ, ಎಲ್ಲೆಡೆ ಕ್ರಿಮಿನಾಶಕ ಔಷಧಿ ಸಿಂಪಡಣೆ, ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕರಿಗೆ ಶೌಚಾಲಯ ವ್ಯವಸ್ಥೆ, ವಿದ್ಯುತ್ ಪೂರೈಕೆ, ರಸ್ತೆಗುಂಡಿಗಳ ಮುಚ್ಚುವಿಕೆ, ಸಿಸಿ ಕ್ಯಾಮೆರಾ ಅಳವಡಿಕೆ, ಹೆಚ್ಚುವರಿ ಪೊಲೀಸ್ ಭದ್ರತೆ ಹಾಗೂ ದೇವಾಲಯದ ಸುತ್ತಮುತ್ತಲಿನ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
“ಜನವರಿ 20ರಿಂದ ಆರಂಭವಾಗಲಿರುವ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವವನ್ನು ಶಿಸ್ತುಬದ್ಧವಾಗಿ, ಯಾವುದೇ ಅಡಚಣೆಗಳಿಲ್ಲದೆ ಯಶಸ್ವಿಯಾಗಿ ನಡೆಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು.”
— – ಶಾಸಕ ಗೋಪಾಲಕೃಷ್ಣ ಬೇಳೂರು
ಜಾತ್ರಾ ಅವಧಿಯಲ್ಲಿ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ಕಡೆ ಆರೋಗ್ಯ ಸೇವೆಗಳನ್ನು ತಕ್ಷಣ ಒದಗಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಭರತ್ ರಾಜ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹರೀಶ್ ಎಂ.ಎನ್., ಜಾತ್ರಾ ಸಮಿತಿ ಅಧ್ಯಕ್ಷ ದತ್ತಾತ್ರೇಯ ಎಚ್.ಎಲ್., ಕಾರ್ಯದರ್ಶಿ ಸುನಿಲ್ ಕುಮಾರ್,ಖಜಾಂಚಿ ಮನೋಹರ್ . ಸಮಿತಿಯ ಸದಸ್ಯರಾದ , ಗಿರೀಶ್ ರಾವ್, ನಿತ್ಯಾನಂದ, ಗೋಪಿ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದರು.








