Hosanagara : ಎಂ.ಗುಡ್ಡೆಕೊಪ್ಪ ಅಂಬೇಡ್ಕರ್ ಕಾಲೋನಿಗೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ನಿವಾಸಿಗಳ ಸಂತಸ

Photo of author

By vishwachetana807@gmail.com

ಹೊಸನಗರ: ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬೇಡ್ಕರ್ ಕಾಲೋನಿ ನಿವಾಸಿಗಳು ಹಲವು ವರ್ಷಗಳಿಂದ ಎದುರಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಇದೀಗ ಶಾಶ್ವತ ಪರಿಹಾರ ದೊರೆತಿದ್ದು, ಗ್ರಾಮಸ್ಥರಲ್ಲಿ ಸಂತಸ ಮನೆಮಾಡಿದೆ.

ಈ ಸಮಸ್ಯೆಯನ್ನು ಅರಿತು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಜಿ.ಎನ್. ಹಾಗೂ ಸದಸ್ಯರಾದ ಶಶಿಕಲಾ ಅಣ್ಣಪ್ಪ ಅವರು ಮಾನ್ಯ ಶಾಸಕರಾದ ಶ್ರೀ ಗೋಪಾಲಕೃಷ್ಣ ಬೇಳೂರು ಅವರ ಬಳಿ ಮನವಿ ಸಲ್ಲಿಸಿದ್ದರು. ಮನವಿಗೆ ತಕ್ಷಣ ಸ್ಪಂದಿಸಿದ ಶಾಸಕರು, ಕೇವಲ ಮೂರು ದಿನಗಳೊಳಗೆ ಬೋರ್ವೆಲ್ ಕೊರೆಸುವಂತೆ ಸೂಚನೆ ನೀಡಿದರು.

ಶಾಸಕರ ಮಾರ್ಗದರ್ಶನದಂತೆ ಗ್ರಾಮ ಪಂಚಾಯತ್ ವತಿಯಿಂದ ಬೋರ್ವೆಲ್ ಕೊರೆಸುವ ಕಾರ್ಯ ಕೈಗೊಳ್ಳಲಾಗಿದ್ದು, ಈ ಬಾರಿ ಯಶಸ್ವಿಯಾಗಿ ನೀರು ಲಭ್ಯವಾಗಿದೆ. ಇದರಿಂದ ಅರಳಿಕೊಪ್ಪ ಹಾಗೂ ಅಂಬೇಡ್ಕರ್ ಕಾಲೋನಿ ನಿವಾಸಿಗಳ ಬಹುಕಾಲದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿದೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಜಿ.ಎನ್. ಮಾತನಾಡಿ, “ಅಂಬೇಡ್ಕರ್ ಕಾಲೋನಿಯಲ್ಲಿ ಕಳೆದ ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿತ್ತು. ಹಿಂದೆ ನಾಲ್ಕೈದು ಬಾರಿ ಬೋರ್ವೆಲ್ ಕೊರೆಸಿದರೂ ಯಶಸ್ಸು ಕಂಡಿರಲಿಲ್ಲ. ಈ ಬಾರಿ ಮಾನ್ಯ ಶಾಸಕರ ತಕ್ಷಣದ ಸ್ಪಂದನೆ, ಮಾರ್ಗದರ್ಶನ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿಗಳ ಸಹಕಾರದಿಂದ ಬೋರ್ವೆಲ್ ಯಶಸ್ವಿಯಾಗಿ ನೀರು ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಅನುದಾನ ತರುವ ಪ್ರಯತ್ನ ಮಾಡಲಾಗುವುದು” ಎಂದು ಹೇಳಿದರು.

ಅದೇ ವೇಳೆ ಸ್ಥಳೀಯ ಅಣ್ಣಪ್ಪ ಮಾತನಾಡಿ,
“ಅಂಬೇಡ್ಕರ್ ಕಾಲೋನಿಯಲ್ಲಿ ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇತ್ತು. ಈ ಬಾರಿ ಮಾನ್ಯ ಶಾಸಕರ ತಕ್ಷಣದ ಸ್ಪಂದನೆ ಹಾಗೂ ಗ್ರಾಮ ಪಂಚಾಯತ್ ಸಹಕಾರದಿಂದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿದೆ” ಎಂದು ಸಂತಸ ವ್ಯಕ್ತಪಡಿಸಿದರು..

ಇನ್ನೊಬ್ಬ ಸ್ಥಳೀಯರಾದ ಮಹೇಂದ್ರ ಮಾತನಾಡಿ, ಅಂಬೇಡ್ಕರ್ ಕಾಲೋನಿಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ ಕೊಟ್ಟ ಮಾನ್ಯ ಶಾಸಕರಿಗೂ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಿಗೂ ಕೃತಜ್ಞತೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷರು ಈ ಕಾರ್ಯಕ್ಕೆ ಸಹಕಾರ ನೀಡಿದ ಮಾನ್ಯ ಶಾಸಕರಾದ ಶ್ರೀ ಗೋಪಾಲಕೃಷ್ಣ ಬೇಳೂರು ಹಾಗೂ ಅವರ ಆಪ್ತ ಸಹಾಯಕ ಮಂಜು ಸಣ್ಣಕ್ಕಿ ಅವರಿಗೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮಹೇಂದ್ರ, ಅಣ್ಣಪ್ಪ, ಅಂಬೇಡ್ಕರ್ ಕಾಲೋನಿಯ ಷಣ್ಮುಖ, ರಾಜೇಶ್, ಹರೀಶ್ ಸೇರಿದಂತೆ ಇತರ ನಿವಾಸಿಗಳು ಉಪಸ್ಥಿತರಿದ್ದರು.

Leave a Comment