Hosanagara: ಹೊಸನಗರ: ಪೊಲೀಸ್ ಇಲಾಖೆಗೆ ನೂತನ ಗಸ್ತು ವಾಹನ ಅರ್ಪಣೆ; 103 ಫಲಾನುಭವಿಗಳಿಗೆ ಸೌಲಭ್ಯ ವಿತರಣೆ

Photo of author

By vishwachetana807@gmail.com

ಹೊಸನಗರ: ಮಲೆನಾಡು ಭಾಗದ ಕಠಿಣ ಭೌಗೋಳಿಕ ಸವಾಲುಗಳನ್ನು ಎದುರಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಸುಸಜ್ಜಿತ ವಾಹನದ ಅಗತ್ಯವಿತ್ತು. ಇದನ್ನು ಮನಗಂಡು ಸರ್ಕಾರ ನೂತನ ವಾಹನ ಬಿಡುಗಡೆ ಮಾಡಿದೆ ಎಂದು ಶಾಸಕರು ಹಾಗೂ ಅರಣ್ಯ ಕೈಗಾರಿಕಾ ನಿಗಮ ಮಂಡಳಿ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಬೇಳೂರು ಅವರು ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯತ್ ಆವರಣದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ವಿವಿಧ ಇಲಾಖೆಗಳ ಸೌಲಭ್ಯ ವಿತರಣೆ ಹಾಗೂ ಪೊಲೀಸ್ ಇಲಾಖೆಗೆ ಮಂಜೂರಾದ ನೂತನ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾರ್ಮಿಕರಿಗೆ ಶಾಸಕರ ಕಿವಿಮಾತು:ಕಾರ್ಯಕ್ರಮದಲ್ಲಿ ಮೀನುಗಾರರು ಮತ್ತು ಗಾರೆ ಕೆಲಸದ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಗಂಭೀರ ಸಲಹೆ ನೀಡಿದರು. “ಕಾರ್ಮಿಕರು ತಮ್ಮ ಕಷ್ಟದ ದುಡಿಮೆಯ ಒಂದು ಭಾಗವನ್ನು ಕಡ್ಡಾಯವಾಗಿ ಇನ್ಸೂರೆನ್ಸ್ (ವಿಮೆ) ಮತ್ತು ಆರೋಗ್ಯಕ್ಕಾಗಿ ಮೀಸಲಿಡಬೇಕು. ಮೀನುಗಾರಿಕೆ ಹಾಗೂ ಗಾರೆ ಕೆಲಸಗಳಲ್ಲಿ ಅಪಘಾತಗಳ ಸಾಧ್ಯತೆ ಹೆಚ್ಚಿರುವುದರಿಂದ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ” ಎಂದು ಅವರು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ, ಮಲೆನಾಡಿನ ಜನಸೇವೆಯ ನಿಟ್ಟಿನಲ್ಲಿ ಹೊಸ ವಾಹನ ಮಂಜೂರು ಮಾಡಿದ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ ಹಾಗೂ ಗೃಹ ಸಚಿವರಿಗೆ ಶಾಸಕರು ಧನ್ಯವಾದ ಸಲ್ಲಿಸಿದರು.

103 ಫಲಾನುಭವಿಗಳಿಗೆ ಸೌಲಭ್ಯ ವಿತರಣೆ:
2025-26ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಮೂಲಕ ಆಯ್ಕೆಯಾದ ಒಟ್ಟು 103 ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು. ತಾಲ್ಲೂಕಿನ ಟೈಲರಿಂಗ್ (ಹೊಲಿಗೆ ವೃತ್ತಿ), ಗಾರೆ ಕೆಲಸ ಹಾಗೂ ಕಲ್ಲುಕುಟಿಕ ವೃತ್ತಿಯ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣಗಳ ಕಿಟ್ ಹಾಗೂ ಅರ್ಹರಿಗೆ ಬಂಡವಾಳ ಹೂಡಿಕೆ ಸಹಾಯಧನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ಗಣ್ಯರ ಉಪಸ್ಥಿತಿ:ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡೂರು ಚಂದ್ರಮೌಳಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಪ್ರಮುಖರಾದ ಕಳೂರು ಶ್ರೀ ರಾಮೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದುಮ್ಮ ವಿನಯ್ ಕುಮಾರ್, ಬಿ.ಆರ್. ಪ್ರಭಾಕರ್, ಹಿಟಾಚಿ ಶ್ರೀಧರ್, ಬಸವರಾಜ್ ಗಗ್ಗ, ಜಯನಗರ ಗೋಪಿ, ಗುರು ಮೊದಲಾದವರು ಉಪಸ್ಥಿತರಿದ್ದರು.


ಅಧಿಕಾರಿಗಳಾದ ತಾಲ್ಲೂಕು ತಹಶೀಲ್ದಾರ್ ಭರತ್ ರಾಜ್, ತಾಲ್ಲೂಕು ಪಂಚಾಯತ್ ಇಒ ನರೇಂದ್ರ ಕುಮಾರ್, ಸಿಪಿಐ ಗೌಡಪ್ಪ ಗೌಡ, ಪಿಎಸ್ಐ ಶಂಕರಗೌಡ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಫಲಾನುಭವಿಗಳು ಭಾಗವಹಿಸಿದ್ದರು.

ಬರಹ: ತಂಡ, vishwachetana.com

Leave a Comment