​ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ‘ಹಕ್ಕೊತ್ತಾಯ ಪಾದಯಾತ್ರೆ’ ಮೊಳಗಿದ ರಣಕಹಳೆ

Photo of author

By vishwachetana807@gmail.com

ಏಪ್ರಿಲ್ 5 ರಿಂದ ನಗರ–ರಿಪ್ಪನ್‌ಪೇಟೆವರೆಗೆ ಬೃಹತ್ ಚಳವಳಿ: ಮಠಾಧೀಶರು ಹಾಗೂ ಸರ್ವಪಕ್ಷಗಳ ಮುಖಂಡರ ಬೆಂಬಲ

ಹೊಸನಗರ |ದಶಕಗಳ ಹಿಂದೆ ಅಸ್ತಿತ್ವದಲ್ಲಿದ್ದ ಐತಿಹಾಸಿಕ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪಿಸಬೇಕೆಂಬ ದೃಢ ಸಂಕಲ್ಪದೊಂದಿಗೆ, ಏಪ್ರಿಲ್ 5 ಮತ್ತು 6ರಂದು ನಗರ ಹೋಬಳಿಯಿಂದ ರಿಪ್ಪನ್‌ಪೇಟೆಯವರೆಗೆ ಬೃಹತ್ “ಹಕ್ಕೊತ್ತಾಯ ಪಾದಯಾತ್ರೆ” ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.

​ನಗರದ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಹೋರಾಟದ ಸಂಪೂರ್ಣ ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು.

ನಗರದಿಂದಲೇ ಚಾಲನೆ – ಐತಿಹಾಸಿಕ ಹಿನ್ನೆಲೆ
ಶರಾವತಿ ಮುಳುಗಡೆ ಸಂತ್ರಸ್ತರ ಹೋರಾಟದಂತಹ ಮಹತ್ವದ ಚಳುವಳಿಗಳಿಗೆ ಸಾಕ್ಷಿಯಾಗಿರುವ ನಗರ ಹೋಬಳಿಯಿಂದಲೇ ಈ ಬಾರಿ ಕ್ಷೇತ್ರ ಮರುಸ್ಥಾಪನೆಯ ಹೋರಾಟಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಏಪ್ರಿಲ್ 5ರಂದು ಪಾದಯಾತ್ರೆ ಆರಂಭಗೊಂಡು, ಏಪ್ರಿಲ್ 6ರಂದು ರಿಪ್ಪನ್‌ಪೇಟೆಯಲ್ಲಿ ಬೃಹತ್ ಸಮಾರೋಪ ಸಭೆ ನಡೆಯಲಿದೆ. ಸುಮಾರು 5ರಿಂದ 6 ಮಂದಿ ಮಠಾಧೀಶರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದ್ದು, 5–6 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ.

ಸ್ವಾಭಿಮಾನದ ಪ್ರಶ್ನೆ: ಕಲಗೋಡು ರತ್ನಾಕರ್
ಸಭೆಯಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕಲಗೋಡು ರತ್ನಾಕರ್, “ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆ ಎನ್ನುವುದು ಕೇವಲ ರಾಜಕೀಯ ಬೇಡಿಕೆ ಅಲ್ಲ; ಇದು ಇಲ್ಲಿನ ಜನರ ಹಕ್ಕು ಮತ್ತು ಸ್ವಾಭಿಮಾನದ ಪ್ರಶ್ನೆ. ಕ್ಷೇತ್ರ ಪುನರ್ವಿಂಗಡಣೆ ಸಂದರ್ಭದಲ್ಲಿ ಹೊಸನಗರಕ್ಕೆ ಅನ್ಯಾಯವಾಗಿದೆ. ಈ ಭಾಗದ ಸಮಗ್ರ ಅಭಿವೃದ್ಧಿಗೆ ಕ್ಷೇತ್ರ ಮರುಸ್ಥಾಪನೆ ಅತ್ಯಗತ್ಯ,” ಎಂದು ತಿಳಿಸಿದರು.

ಪಕ್ಷಾತೀತ ಬೆಂಬಲ ಈ ಹೋರಾಟಕ್ಕೆ ಯಾವುದೇ ರಾಜಕೀಯ ಪಕ್ಷದ ಭೇದವಿಲ್ಲದೆ ಎಲ್ಲರೂ ಕೈಜೋಡಿಸುತ್ತಿದ್ದಾರೆ. ಮಾಜಿ ಶಾಸಕ ಸ್ವಾಮಿರಾವ್ ಮಾರ್ಗದರ್ಶನ ನೀಡುತ್ತಿದ್ದರೆ, ಹೊಸನಗರ ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರ ಹೂವಿನಕೋಣೆ, ಮುಖಂಡರಾದ ಎನ್.ಆರ್. ದೇವಾನಂದ್, ಗ್ರಾ.ಪಂ. ಸದಸ್ಯ ಕರುಣಾಕರ ಶೆಟ್ಟಿ ಸೇರಿದಂತೆ ಹಲವರು ಸಕ್ರಿಯರಾಗಿದ್ದಾರೆ. ಸಾಗರ ಮತ್ತು ತೀರ್ಥಹಳ್ಳಿ ಶಾಸಕರು ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ಈಗಾಗಲೇ ಬೆಂಬಲ ಸೂಚಿಸಿರುವುದು ಹೋರಾಟಕ್ಕೆ ಆನೆಬಲ ಬಂದಂತಾಗಿದೆ.

ವಿಶೇಷ ಸಮಿತಿ ರಚನೆ ಹೋರಾಟವನ್ನು ವ್ಯವಸ್ಥಿತವಾಗಿ ನಡೆಸಲು ಸಾಹಿತಿಗಳು, ರೈತರು ಹಾಗೂ ಯುವಕರನ್ನು ಒಳಗೊಂಡ 20 ಸದಸ್ಯರ ವಿಶೇಷ ಸಮಿತಿಯನ್ನು ರಚಿಸಲಾಗಿದೆ. “ನಗರ ಭಾಗವು ಹಿಂದೆ ಆಡಳಿತದ ಕೇಂದ್ರವಾಗಿತ್ತು. ಈ ಪಾದಯಾತ್ರೆ ಸರ್ಕಾರದ ಕಣ್ಣು ತೆರೆಸುವ ಶಕ್ತಿಯುತ ಚಳುವಳಿಯಾಗಲಿದೆ,” ಎಂದು ಸಮಿತಿ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸ್ವಾಭಿಮಾನಿ ಪಾದಯಾತ್ರೆಯಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಭಾಗವಹಿಸಬೇಕೆಂದು ಹೋರಾಟ ಸಮಿತಿ ಮನವಿ ಮಾಡಿದೆ.

ಬರಹ: ತಂಡ, vishwachetana.com

Leave a Comment