ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಹೋರಾಟ

Photo of author

By vishwachetana807@gmail.com

30- ಗ್ರಾಮ ಪಂಚಾಯತ್‌ಗಳಿಗೆ ಸೈಕಲ್ ಯಾತ್ರೆ – ಕರುಣಾಕರ ಶೆಟ್ಟಿ ನೇತೃತ್ವ

ಹೊಸನಗರ: ಕಳೆದುಕೊಂಡ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪಿಸಬೇಕೆಂಬ ಮಹತ್ವದ ಬೇಡಿಕೆಗೆ ಶಕ್ತಿ ನೀಡುವ ಉದ್ದೇಶದಿಂದ ತಾಲೂಕಿನಾದ್ಯಂತ ಸೈಕಲ್ ಯಾತ್ರೆ ಆರಂಭಿಸಲಾಗಿದೆ ಎಂದು ಹೋರಾಟದ ಸಂಚಾಲಕರಾದ ಕರುಣಾಕರ ಶೆಟ್ಟಿ ತಿಳಿಸಿದ್ದಾರೆ.

ಪಶ್ಚಿಮ ಘಟ್ಟದ ಕಣಿವೆಗಳಲ್ಲಿ ಸ್ಥಿತವಾಗಿರುವ ಹೊಸನಗರ ತಾಲೂಕು ಪ್ರಕೃತಿಸಂಪನ್ನ ಪ್ರದೇಶವಾಗಿದ್ದರೂ, ಜಲವಿದ್ಯುತ್ ಯೋಜನೆಗಳಿಗಾಗಿ ನಿರ್ಮಾಣಗೊಂಡ ಐದು ಸಣ್ಣ ಡ್ಯಾಂಗಳಿಂದ ಅನೇಕ ಕುಟುಂಬಗಳು ಮನೆ ಮತ್ತು ಭೂಮಿ ಕಳೆದುಕೊಂಡು ನಿರ್ವಸಿತರಾಗಿದ್ದಾರೆ. ಇದರ ಪರಿಣಾಮವಾಗಿ ಜನಸಂಖ್ಯೆ ಕುಸಿತಗೊಂಡಿದ್ದು, ಅಭಿವೃದ್ಧಿಯ ವೇಗವೂ ಹಿಂದುಳಿದಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ತಾಲೂಕು ಕೇಂದ್ರವಾಗಿದ್ದ ಹೊಸನಗರವು ಕ್ಷೇತ್ರ ವಿಂಗಡಣೆಯ ಸಂದರ್ಭದಲ್ಲಿ ತನ್ನ ವಿಧಾನಸಭಾ ಕ್ಷೇತ್ರ ಸ್ಥಾನಮಾನವನ್ನು ಕಳೆದುಕೊಂಡಿತು. ಇದರಿಂದ ಇಲ್ಲಿನ ಜನರಿಗೆ ಪ್ರಜಾಪ್ರಭುತ್ವದ ಪ್ರತಿನಿಧಿತ್ವವೇ ಇಲ್ಲದಂತಾಗಿದೆ. “ಅಭಿವೃದ್ಧಿಗೆ ಕ್ಷೇತ್ರ ಬೇಕು, ಪ್ರಶ್ನಿಸಲು ಕ್ಷೇತ್ರ ಬೇಕು, ವಿಧಾನಸಭೆಯಲ್ಲಿ ಧ್ವನಿ ಎತ್ತಲು ಕ್ಷೇತ್ರ ಬೇಕು. ನಮ್ಮ ಅಸ್ತಿತ್ವಕ್ಕಾಗಿ ಆದರೂ ಕ್ಷೇತ್ರ ಬೇಕು,” ಎಂದು ಕರುಣಾಕರ ಶೆಟ್ಟಿ ಅಭಿಪ್ರಾಯಪಟ್ಟರು.

ಈ ಹಿನ್ನೆಲೆಯಲ್ಲಿ ಹೊಸನಗರ ತಾಲೂಕಿನ 30- ಗ್ರಾಮ ಪಂಚಾಯತ್‌ಗಳಿಗೆ ಸೈಕಲ್ ಮೂಲಕ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಂಡಿರುವುದಾಗಿ ತಿಳಿಸಿದರು. ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಸಭೆ ನಡೆಸಿ ನಿರ್ಣಯಗಳನ್ನು ಕೈಗೊಂಡು ಸರ್ಕಾರದ ಗಮನ ಸೆಳೆಯಲು ಮನವಿ ಮಾಡಲಾಗುವುದು ಎಂದು ಹೇಳಿದರು.

ಸೈಕಲ್ ಯಾತ್ರೆ ವೇಳಾಪಟ್ಟಿ
19-01-2026
ಸುಳುಗೋಡು, ಯಡೂರು, ಖೈರಗುಂದ, ಅಂಡಗದೋದೂರು, ಕರಿಮನೆ, ನಗರ, ಅರಮನೆಕೊಪ್ಪ
20-01-2026
ಸಂಪೆಕಟ್ಟೆ, ನಿಟ್ಟೂರು, ಹೊಸನಗರ ಪಟ್ಟಣ ಪಂಚಾಯ್ತಿ, ಜೇನಿ (ಭೀಮನಕೆರೆ)
21-01-2026
ಮಾರುತಿಪುರ, ಹರಿದ್ರಾವತಿ, ಪುರಪ್ಪೆಮನೆ, ಹರತಾಳು, ಬಾಳೂರು
22-01-2026
ರಿಪ್ಪನ್ ಪೇಟೆ, ಕೆಂಚನಾಲ, ಅರಸಾಳು, ಬೆಳ್ಳೂರು, ಹೆದ್ದಾರಿಪುರ, ಅಮೃತ
23-01-2026
ಹುಂಚಾ, ಮುಂಬಾರು, ಚಿಕ್ಕಜೇನಿ
27-01-2026
ಕೋಡೂರು, ಎಂ ಗುಡ್ಡೆಕೊಪ್ಪ, ಸೊನಲೆ, ತಿಣಿವೆ, ರಾಮಚಂದ್ರಾಪುರ, ಮೇಲಿನಬೆಸಿಗೆ

ಕರುಣಾಕರ ಶೆಟ್ಟಿ ಅವರು, “ಮುಂದಿನ ಕ್ಷೇತ್ರ ವಿಂಗಡಣೆ ಯಲ್ಲಿ ಹೊಸನಗರ ವನ್ನು ಮತ್ತೆ ವಿಧಾನಸಭಾ ಕ್ಷೇತ್ರವನ್ನಾಗಿಸಲು ಸಮಿತಿ ವಿಶೇಷ ಗಮನ ಹರಿಸಬೇಕು. ಇದಕ್ಕಾಗಿ ಜನರ ಒಗ್ಗಟ್ಟು ಮತ್ತು ಸಹಕಾರ ಅತ್ಯಗತ್ಯ,” ಎಂದು ಹೇಳಿದರು.
ಈ ಹೋರಾಟಕ್ಕೆ ತಾಲೂಕಿನಾದ್ಯಂತ ಜನರು, ಜನಪ್ರತಿನಿಧಿಗಳು ಹಾಗೂ ಸಂಘಟನೆಗಳು ಬೆಂಬಲ ನೀಡುವಂತೆ ಅವರು ಮನವಿ ಮಾಡಿದ್ದಾರೆ.

PM SHRI ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹೊಸನಗರ –“ಚಿಣ್ಣರ ಸಾಂಸ್ಕೃತಿಕ ವೈಭವ”

Leave a Comment