BSNL ನೆಟ್ವರ್ಕ್ಗೆ ಶ್ರದ್ಧಾಂಜಲಿ! ಬ್ಯಾನರ್ ಹಾಕಿ
ಹುಂಚ ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ..
ರಿಪ್ಪನ್ಪೇಟೆ : ಹುಂಚ ಹೋಬಳಿಯ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಪ್ರಮುಖ ಸಂಪರ್ಕ ಸೇತುವೆಯಾಗಿದ್ದ ಬಿಎಸ್ಎನ್ಎಲ್ ನೆಟ್ವರ್ಕ್ ಕಳೆದ ಒಂದೂವರೆ ತಿಂಗಳಿನಿಂದ ಸಂಪೂರ್ಣವಾಗಿ ಕಾರ್ಯನಿರ್ವಹಿಸದೆ ಗ್ರಾಮಸ್ಥರನ್ನು ತೀವ್ರ ಸಂಕಷ್ಟಕ್ಕೆ ಒಳಪಡಿಸಿದೆ.

ದೂರವಾಣಿ ಹಾಗೂ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದ್ದರೂ, ಸಂಬಂಧಪಟ್ಟ ಅಧಿಕಾರಿಗಳಿಗೆ ಮರುಮರು ದೂರು ನೀಡಿದರೂ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಬೇಸತ್ತ ಗ್ರಾಮಸ್ಥರು ಶನಿವಾರ ಬಿಎಸ್ಎನ್ಎಲ್ ಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನಡೆಸುವ ಮೂಲಕ ವಿನೂತನ ಹಾಗೂ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಹುಂಚ ಗ್ರಾಮದಲ್ಲಿ ಗ್ರಾಮಸ್ಥರೆಲ್ಲರೂ ಒಂದೆಡೆ ಸೇರಿ, ಒಂದು ಕಾಲದಲ್ಲಿ ಉತ್ತಮ ಸೇವೆ ನೀಡುತ್ತಿದ್ದ ಹುಂಚ ಬಿಎಸ್ಎನ್ಎಲ್ ಟವರ್ನ ಹಳೆಯ ದಿನಗಳನ್ನು ನೆನಪಿಸಿಕೊಂಡು, ಸಂಸ್ಥೆಯ ನಿರ್ಲಕ್ಷ್ಯದ ಕುರಿತು ನೋವಿನ ಮಾತುಗಳನ್ನು ಹಂಚಿಕೊಂಡರು.
ನಂತರ ಬಿಎಸ್ಎನ್ಎಲ್ ಸೇವೆಯ ‘ಮರಣ’ವನ್ನು ಸೂಚಿಸುವಂತೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಿ, ಎರಡು ನಿಮಿಷಗಳ ಮೌನಾಚರಣೆ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು.

ಈ ವೇಳೆ ಮಾತನಾಡಿದ ಗ್ರಾಮಸ್ಥರು, “ಇನ್ನಾದರೂ ಸರ್ಕಾರಿ ಸಂಸ್ಥೆ ಉಳಿಸಿ, ಗ್ರಾಹಕರ ಸಮಸ್ಯೆಗಳನ್ನು ಅಳಿಸಿ. ಖಾಸಗಿ ಸಂಸ್ಥೆಗಳೊಂದಿಗೆ ಸ್ಪರ್ಧೆ ಮಾಡುವ ಮೊದಲು ಮೂಲಭೂತ ಸೇವೆಗಳನ್ನು ಸರಿಪಡಿಸಲಿ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಆನ್ಲೈನ್ ಶಿಕ್ಷಣ, ರೈತರ ಸರ್ಕಾರಿ ಮಾಹಿತಿ, ವ್ಯಾಪಾರ ವಹಿವಾಟು, ತುರ್ತು ಸಂಪರ್ಕ ಸೇರಿದಂತೆ ಎಲ್ಲ ಕ್ಷೇತ್ರಗಳ ಮೇಲೆ ಬಿಎಸ್ಎನ್ಎಲ್ ನೆಟ್ವರ್ಕ್ ಸ್ಥಗಿತದಿಂದ ಗಂಭೀರ ಪರಿಣಾಮ ಉಂಟಾಗಿದೆ ಎಂದು ಗ್ರಾಮಸ್ಥರು ದೂರಿದರು.

ಈ ವಿಶೇಷ ಪ್ರತಿಭಟನಾ ಕಾರ್ಯಕ್ರಮದಲ್ಲಿ ಯದುಕುಮಾರ್, ಪುಂಡಲಿಕ, ಬಾಬು, ಗುರುರಾಜ್ ಸೇರಿದಂತೆ ಅನೇಕ ಗ್ರಾಮಸ್ಥರು ಭಾಗವಹಿಸಿ, ಸರ್ಕಾರ ಹಾಗೂ ಬಿಎಸ್ಎನ್ಎಲ್ ಉನ್ನತ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು









1 thought on “Hosanagara: Rippan pete – BSNL ಸೇವೆ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ”