ಬೆಂಗಳೂರು ಸಭೆಯಲ್ಲಿ ಸಮಿತಿಯ ಏಕಮತದ ನಿರ್ಣಯ – ಸಮಾಜದ ಏಳಿಗೆಗೆ ಸಮಗ್ರ ಕಾರ್ಯಯೋಜನೆ ಘೋಷಣೆ

ಬೆಂಗಳೂರು: ಇಂದು ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈಶ್ವರ್ ಖಂಡ್ರೆ ಅವರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಿತಿಯ ಎಲ್ಲಾ ಸದಸ್ಯರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.

ಕಳೆದ 13 ವರ್ಷಗಳಿಂದ ಮಹಾಸಭೆಯ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವುದಾಗಿ ಹಾಗೂ ಇತ್ತೀಚಿನ ಒಂದು ವರ್ಷ ಹಿರಿಯ ಉಪಾಧ್ಯಕ್ಷರ ಪ್ರಭಾರ ಹೊಣೆಗಾರಿಕೆಯನ್ನು ನಿಭಾಯಿಸಿದ್ದಾಗಿ ಅವರು ತಿಳಿಸಿದರು. ತಮ್ಮ ಪೂಜ್ಯ ತಂದೆ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಅವರ ಆದರ್ಶ ಮಾರ್ಗದಲ್ಲೇ ನಡೆದು, ವೀರಶೈವ ಲಿಂಗಾಯತ ಸಮಾಜದ ಏಳಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುವ ಸಂಕಲ್ಪವನ್ನು ಪುನರುಚ್ಚರಿಸಿದರು.
ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಮಾಜದ ಎಲ್ಲಾ ಒಳಪಂಗಡಗಳನ್ನು ಒಗ್ಗೂಡಿಸುವುದೇ ಮಹಾಸಭೆಯ ಪ್ರಮುಖ ಗುರಿ ಎಂದರು. “ಒಗ್ಗಟ್ಟಿನಲ್ಲಿ ಬಲವಿದೆ, ವಿಭಜನೆನಲ್ಲಿ ದೌರ್ಬಲ್ಯವಿದೆ” ಎಂಬ ನಂಬಿಕೆಯಿಂದ ಎಲ್ಲರನ್ನು ಜೊತೆಯಲ್ಲಿ ತೆಗೆದುಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.

ಸಮಾಜದಲ್ಲಿ ಶೇ.40–50ರಷ್ಟು ಬಡವರು ಹಾಗೂ ಶೇ.30ಕ್ಕಿಂತ ಹೆಚ್ಚು ತೀವ್ರ ಹಿಂದುಳಿದ ವರ್ಗದವರಿದ್ದಾರೆ. ಸಾಮಾಜಿಕ ನ್ಯಾಯ ಎಲ್ಲರಿಗೂ ದೊರಕಬೇಕು ಎಂಬ ಧ್ಯೇಯದೊಂದಿಗೆ ಸಮಾನ ಅವಕಾಶ ಹಾಗೂ ನ್ಯಾಯಕ್ಕಾಗಿ ಮಹಾಸಭೆಯ ಮೂಲಕ ನಿರಂತರ ಪ್ರಯತ್ನ ನಡೆಸಲಾಗುವುದು ಎಂದು ಅವರು ತಿಳಿಸಿದಮುಂದಿನ ಮಾರ್ಚ್ ತಿಂಗಳೊಳಗೆ ಬೆಂಗಳೂರು ನಗರದಲ್ಲಿ 1000 ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಸಲಾಗುವುದು ಹಾಗೂ ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಘೋಷಿಸಿದರು.
ವೀರಶೈವ ಲಿಂಗಾಯತ ಭವನ ಇಲ್ಲದ ಜಿಲ್ಲೆಗಳಲ್ಲಿ ಭವನ ನಿರ್ಮಾಣ, ಸಮುದಾಯದ ಪ್ರತಿಭಾವಂತರಿಗೆ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ವ್ಯವಸ್ಥೆ ಮಾಡುವುದೂ ಮಹಾಸಭೆಯ ಪ್ರಮುಖ ಕಾರ್ಯಯೋಜನೆಯಾಗಿರುತ್ತದೆ ಎಂದರು
ಪಂಚಾಚಾರ್ಯರು, ಜಗದ್ಗುರುಗಳು, ಮಠಾಧಿಪತಿಗಳು, ಹರ-ಚರ ಗುರುಮೂರ್ತಿಗಳು ಮತ್ತು ವಿರಕ್ತರ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ, ಎಲ್ಲ ಜಾತಿ–ಜನಾಂಗದವರನ್ನೂ ಜೊತೆಯಲ್ಲಿ ತೆಗೆದುಕೊಂಡು ಲೋಕಕಲ್ಯಾಣ, ಜನಹಿತ ಮತ್ತು ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವೆ ಎಂದು ಖಂಡ್ರೆ ಭರವಸೆ ನೀಡಿದರು.

1904ರಲ್ಲಿ ಪರಮಪೂಜ್ಯ ಹಾನಗಲ್ ಕುಮಾರೇಶ್ವರ ಮಹಾಸ್ವಾಮೀಜಿ ಅವರ ದಿವ್ಯ ಸಂಕಲ್ಪದಿಂದ ಸ್ಥಾಪಿತವಾದ ಮಹಾಸಭೆಗೆ ಸಿರಸಂಗಿ ಲಿಂಗರಾಜದೇಸಾಯರು, ರಾಜಾ ಲಖಮನಗೌಡರು, ಫ.ಗು. ಹಳಕಟ್ಟಿಯವರು, ಬಂಥನಾಳ ಸಂಗನ ಬಸವ ಸ್ವಾಮಿಗಳು, ಶತಾಯುಷಿ ಡಾ. ಶಿವಕುಮಾರ ಮಹಾಸ್ವಾಮೀಜಿ, ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪ ಮೊದಲಾದ ಮಹಾನ್ ನಾಯಕರು ಸೇವೆ ಸಲ್ಲಿಸಿರುವುದನ್ನು ಸ್ಮರಿಸಿದರು. ಆ ಪರಂಪರೆಯ ಈ ಸ್ಥಾನದಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ತಮ್ಮ ಸೌಭಾಗ್ಯ ಎಂದು ಹೇಳಿದರು.







