ಶಿವಮೊಗ್ಗ ಗ್ರಾಮಾಂತರ : ರೇಚಿನಕೊಪ್ಪ ಗ್ರಾಮದ ರೈತರ ತೋಟದಲ್ಲಿ ನೀರಿಗಾಗಿ ಬೋರ್‌ವೆಲ್ ಕೊರೆಸುವ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಪದೇಪದೇ ಅಡ್ಡಿಪಡಿಸುತ್ತಿರುವುದನ್ನು ಖಂಡಿಸಿ, ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕಲಗೋಡು ರತ್ನಾಕರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇಂದು ರೇಚಿನಕೊಪ್ಪ ಗ್ರಾಮದ ಬಾಧಿತ ರೈತರ ತೋಟಕ್ಕೆ ಖುದ್ದಾಗಿ ಭೇಟಿ ನೀಡಿದ ಅವರು, ಸ್ಥಳದಲ್ಲಿದ್ದ ರೈತರ ಸಮಸ್ಯೆಗಳನ್ನು ಆಲಿಸಿದರು. ರೈತರು ತಮ್ಮ ಸ್ವಂತ ಜಮೀನಿನಲ್ಲಿ ಕೃಷಿ ಅಭಿವೃದ್ಧಿಗಾಗಿ ಬೋರ್‌ವೆಲ್ ಹಾಕಿಸಲು ಮುಂದಾದಾಗ, ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬಂದು ಕಾಮಗಾರಿ ತಡೆಯುತ್ತಿರುವುದು ಮತ್ತು ರೈತರಿಗೆ ತೊಂದರೆ ನೀಡುತ್ತಿರುವುದನ್ನು ಅವರು ಗಮನಿಸಿದರು.


ಅಧಿಕಾರಿಗಳ ಧೋರಣೆಗೆ ಖಂಡನೆ:ಈ ಸಂದರ್ಭದಲ್ಲಿ ಮಾತನಾಡಿದ ಕಲಗೋಡು ರತ್ನಾಕರ್ ಅವರು, “ಬೆವರು ಸುರಿಸಿ ಅನ್ನ ನೀಡುವ ರೈತ ತನ್ನ ತೋಟದಲ್ಲಿ ನೀರಿಗಾಗಿ ಬೋರ್‌ವೆಲ್ ಕೊರೆಸಲು ಹೋದರೆ ಅರಣ್ಯ ಇಲಾಖೆಯವರು ಅಡ್ಡಿಪಡಿಸುವುದು ಎಷ್ಟರ ಮಟ್ಟಿಗೆ ಸರಿ? ರೈತರ ತಾಳ್ಮೆಯನ್ನು ಪರೀಕ್ಷಿಸಬೇಡಿ” ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ರೈತರು ಭೂಮಿಯ ಹಕ್ಕನ್ನು ಹೊಂದಿದ್ದರೂ ಸಹ, ಸಣ್ಣಪುಟ್ಟ ಕಾರಣಗಳನ್ನು ಮುಂದಿಟ್ಟುಕೊಂಡು ಅಭಿವೃದ್ಧಿ ಕೆಲಸಗಳಿಗೆ ತಡೆಯೊಡ್ಡುವುದು ಅಧಿಕಾರ ದುರುಪಯೋಗವಾಗಿದೆ ಎಂದು ಅವರು ಕಿಡಿಕಾರಿದರು. ಅರಣ್ಯ ಇಲಾಖೆಯವರು ಪದೇಪದೇ ರೈತರಿಗೆ ತೊಂದರೆ ನೀಡುತ್ತಿರುವುದನ್ನು ತೀವ್ರವಾಗಿ ಖಂಡಿಸಿದ ಅವರು, ಕೂಡಲೇ ಅರಣ್ಯ ಇಲಾಖೆಯವರು ಕಿರುಕುಳವನ್ನು ನಿಲ್ಲಿಸಬೇಕು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಿಕಟಪೂರ್ವ ಅಭ್ಯರ್ಥಿ ಶ್ರೀನಿವಾಸ ಕರಿಯಣ್ಣ. ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್. ಮುಖಂಡರಾದ ಸುರೇಶ್ ಶೆಟ್ಟಿಕೆರೆ. ರಾಜಪ್ಪ ಶೆಟ್ಟಿಕೆರೆ. ಸಚಿನ್ ಪುರದಾಳು. ರೇಚಿನಕೊಪ್ಪ ಗ್ರಾಮದ ಪ್ರಮುಖರು, ಕೃಷಿಕರು ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದು, ಇಲಾಖೆಯ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಬರಹ: ತಂಡ, vishwachetana.com







