ಜನಗಣತಿ 2027: ಆನ್‌ಲೈನ್‌ನಲ್ಲಿ ಸ್ವಯಂ ಗಣತಿ ಪೂರ್ಣಗೊಳಿಸಲು ಏಪ್ರಿಲ್ 15 ಕೊನೆಯ ದಿನ

Photo of author

By vishwachetana807@gmail.com

ಹೊಸನಗರ: ರಾಷ್ಟ್ರದ ಭವಿಷ್ಯದ ಯೋಜನೆಗಳ ರೂಪಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ‘ಜನಗಣತಿ 2027’ ಪ್ರಕ್ರಿಯೆ ಇದೀಗ ಚುರುಕುಗೊಂಡಿದೆ. ಪ್ರತಿಯೊಬ್ಬ ನಾಗರಿಕನು ಜವಾಬ್ದಾರಿಯುತವಾಗಿ ತನ್ನ ಮತ್ತು ತನ್ನ ಕುಟುಂಬದ ವಿವರಗಳನ್ನು ಆನ್‌ಲೈನ್ ಮೂಲಕ ದಾಖಲಿಸಲು ಸರ್ಕಾರ ಮುಕ್ತ ಅವಕಾಶ ನೀಡಿದ್ದು, ಈ ‘ಸ್ವಯಂ ಗಣತಿ’ ಪೂರ್ಣಗೊಳಿಸಲು ಏಪ್ರಿಲ್ 15 ಕೊನೆಯ ದಿನವಾಗಿದೆ.

ಡಿಜಿಟಲ್ ವೇದಿಕೆಯಲ್ಲೇ ಮಾಹಿತಿ ಸಲ್ಲಿಕೆ:
ಹಿಂದಿನಂತೆ ಕೇವಲ ಗಣತಿದಾರರು ಮನೆಗೆ ಬಂದಾಗ ಮಾಹಿತಿ ನೀಡುವುದಷ್ಟೇ ಅಲ್ಲದೆ, ಈ ಬಾರಿ ಸಾರ್ವಜನಿಕರು ತಾವಾಗಿಯೇ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಮಾಹಿತಿ ನೀಡಬಹುದು. ಇದಕ್ಕಾಗಿ se.census.gov.in ಪೋರ್ಟಲ್ ಸಿದ್ಧಪಡಿಸಲಾಗಿದೆ.

ಮಾಹಿತಿ ತುಂಬುವ ಸರಳ ಹಂತಗಳು:
•ನಾಗರಿಕರು ಮೊದಲು ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಸ್ವೀಕರಿಸಿದ ಒಟಿಪಿ (OTP) ಮೂಲಕ ಲಾಗಿನ್ ಆಗಬೇಕು.
•ನಂತರ ತಮ್ಮ ವಾಸಸ್ಥಳದ ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮ/ವಾರ್ಡ್ ಅನ್ನು ಆಯ್ಕೆ ಮಾಡಬೇಕು.
•ಡಿಜಿಟಲ್ ನಕ್ಷೆಯಲ್ಲಿ (Digital Map) ತಮ್ಮ ಮನೆಯನ್ನು ನಿಖರವಾಗಿ ಗುರುತಿಸಿ, ಕುಟುಂಬದ ಸದಸ್ಯರ ಮತ್ತು ಮನೆಯ ಮೂಲಭೂತ ಸೌಕರ್ಯಗಳ ವಿವರಗಳನ್ನು ಭರ್ತಿ ಮಾಡಬೇಕು.
•ಪ್ರಕ್ರಿಯೆ ಯಶಸ್ವಿಯಾಗಿ ಮುಗಿದ ನಂತರ ಸ್ಕ್ರೀನ್ ಮೇಲೆ ‘SE Reference ID’ ಮೂಡಲಿದ್ದು, ಇದನ್ನು ನಾಗರಿಕರು ಸುರಕ್ಷಿತವಾಗಿರಿಸಿಕೊಳ್ಳಬೇಕು.

ಗಣತಿದಾರರ ಭೇಟಿ ವೇಳೆ ಸಹಕರಿಸಿ:
ಏಪ್ರಿಲ್ 15ರ ಒಳಗಾಗಿ ಸ್ವಯಂ ಗಣತಿ ಪೂರ್ಣಗೊಳಿಸಿದ ನಾಗರಿಕರು, ತಮ್ಮ ಬಳಿ ಇರುವ ‘SE ID’ ಅನ್ನು ಏಪ್ರಿಲ್ 16ರಿಂದ ಮೇ 15ರ ವರೆಗೆ ಮನೆ ಮನೆಗೆ ಭೇಟಿ ನೀಡುವ ಗಣತಿದಾರರಿಗೆ ನೀಡಬೇಕು. ಇದು ಗಣತಿ ಪ್ರಕ್ರಿಯೆಯನ್ನು ಸುಲಭ ಹಾಗೂ ದೋಷರಹಿತವಾಗಿಸಲು ಸಹಕಾರಿಯಾಗಲಿದೆ.
ನಿಗದಿತ ಅವಧಿಯೊಳಗೆ ಪ್ರತಿಯೊಬ್ಬರೂ ತಮ್ಮ ವಿವರಗಳನ್ನು ದಾಖಲಿಸುವ ಮೂಲಕ ರಾಷ್ಟ್ರೀಯ ಕಾರ್ಯಕ್ಕೆ ಸಹಕರಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ..

ಬರಹ: Chetandas Hosamane

Leave a Comment