2026ರ ಜನವರಿ 26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಭಾರತ ಪರ್ವದಲ್ಲಿ ಕರ್ನಾಟಕದ ಸ್ವಾವಲಂಬಿ ಸಾಧನೆಗಳನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರ ಪ್ರದರ್ಶನ
ಬೆಂಗಳೂರು: ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಸೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದು, ಈ ಸಾಧನೆಯನ್ನು ಸಂಕೇತಿಸುವಂತೆ ‘ಸಿರಿಧಾನ್ಯದಿಂದ ಮೈಕ್ರೋಚಿಪ್’ ವರೆಗೆ ಎಂಬ ಸ್ತಬ್ಧಚಿತ್ರವನ್ನು 2026ರ ಜನವರಿ 26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಅಂಗವಾಗಿ ಕೆಂಪು ಕೋಟೆಯಲ್ಲಿ ಆಯೋಜಿಸುವ ಭಾರತ ಪರ್ವದಲ್ಲಿ ಕರ್ನಾಟಕ ಪ್ರದರ್ಶಿಸುತ್ತಿದೆ.

ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನ ಹಾಗೂ ಭಾರತ ಪರ್ವದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರತಿವರ್ಷ ತನ್ನ ವೈಶಿಷ್ಟ್ಯಪೂರ್ಣ ಸ್ತಬ್ಧಚಿತ್ರಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈ ಬಾರಿ ಕೃಷಿ, ಶಿಕ್ಷಣ, ವಿಜ್ಞಾನ, ಉನ್ನತ ತಂತ್ರಜ್ಞಾನ ಹಾಗೂ ಮೈಕ್ರೋಚಿಪ್ ಉತ್ಪಾದನೆಯಲ್ಲಿ ಸಾಧಿಸಿರುವ ಸಮತೋಲನಯುತ ಪ್ರಗತಿಯನ್ನು ಸ್ತಬ್ಧಚಿತ್ರದಲ್ಲಿ ಪ್ರದರ್ಶಿಸಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್ ತಿಳಿಸಿದ್ದಾರೆ.


ಸಿರಿಧಾನ್ಯ ಉತ್ಪಾದನೆ ಮತ್ತು ಪೌಷ್ಟಿಕ ಆಹಾರ ಬಳಕೆಯನ್ನು ಉತ್ತೇಜಿಸುವಲ್ಲಿ ಕರ್ನಾಟಕ ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿದೆ. ಮೈಕ್ರೋಚಿಪ್, ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ವಲಯಗಳಲ್ಲಿನ ಆವಿಷ್ಕಾರಗಳು ಕರ್ನಾಟಕವನ್ನು ಶ್ರೇಷ್ಠ ತಂತ್ರಜ್ಞಾನ ಕೇಂದ್ರವನ್ನಾಗಿಸಿವೆ. ಇವೆಲ್ಲವೂ ಈ ಬಾರಿ ಸ್ತಬ್ಧಚಿತ್ರದಲ್ಲಿ ಒಗ್ಗೂಡಿವೆ.
ಸಂಶೋಧನೆ, ನವೀನತೆ ಹಾಗೂ ಕೌಶಲ್ಯಾಭಿವೃದ್ಧಿಗೆ ನೀಡಲಾಗುತ್ತಿರುವ ವಿಶೇಷ ಆದ್ಯತೆಯ ಮೂಲಕ ಯುವಶಕ್ತಿಗೆ ಉದ್ಯಮಶೀಲ ಅವಕಾಶಗಳನ್ನು ಒದಗಿಸಿ, ಭವಿಷ್ಯದ ಆರ್ಥಿಕತೆಗೆ ಭದ್ರ ಬುನಾದಿಯನ್ನು ಕರ್ನಾಟಕ ನಿರ್ಮಿಸುತ್ತಿದೆ. ಹೂಡಿಕೆ ಸ್ನೇಹಿ ನೀತಿಗಳ ಮೂಲಕ ಉತ್ಪಾದನಾ ವಲಯದಲ್ಲಿ ಗರಿಷ್ಠ ಬೆಳವಣಿಗೆಯನ್ನು ಸಾಧಿಸಿರುವ ರಾಜ್ಯವು ಕೈಗಾರಿಕಾ ಅಭಿವೃದ್ಧಿಯಲ್ಲಿಯೂ ಮುಂಚೂಣಿಯಲ್ಲಿದ್ದು, ‘ಸ್ಟಾರ್ಟ್‌ಅಪ್ ಕ್ಯಾಪಿಟಲ್ ಆಫ್ ಇಂಡಿಯಾ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದೆಹಲಿಯ ಗಣರಾಜ್ಯೋತ್ಸವದ ಸ್ತಬ್ಧಚಿತ್ರದ ವಿಷಯ ಆಯ್ಕೆ, ವಿನ್ಯಾಸ, ರಕ್ಷಣಾ ಸಚಿವಾಲಯದಲ್ಲಿ ಅನುಮೋದನೆ, ನಿರ್ಮಾಣ ಹಾಗೂ ಪಾಲ್ಗೊಳ್ಳುವಿಕೆ ಸೇರಿದಂತೆ ಎಲ್ಲಾ ಹಂತಗಳಲ್ಲೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ. ಕಳೆದ 16 ವರ್ಷಗಳಿಂದ ನಿರಂತರವಾಗಿ (2024 ಮತ್ತು 2026ರಲ್ಲಿ) ಗಣರಾಜ್ಯೋತ್ಸವದ ಪಥಸಂಚಲನ ಹಾಗೂ ಭಾರತ ಪರ್ವದಲ್ಲಿ ಕರ್ನಾಟಕ ಪಾಲ್ಗೊಳ್ಳುತ್ತಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.
2026ರ ಗಣರಾಜ್ಯೋತ್ಸವಕ್ಕಾಗಿ ಇಲಾಖೆ
ಕಿತ್ತೂರು ರಾಣಿ ಚೆನ್ನಮ್ಮ ಮತ್ತು ರಾಣಿ ಅಬ್ಬಕ್ಕದೇವಿ
ಕರ್ನಾಟಕ ಪುಷ್ಪ ವೈಭವ
ಹಲಗಲಿ ಬೇಡರು
‘ಸಿರಿಧಾನ್ಯದಿಂದ ಮೈಕ್ರೋಚಿಪ್’ ವರೆಗೆ
ಎಂಬ ನಾಲ್ಕು ವಿಷಯಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿತ್ತು. ಮೊದಲ ಸಭೆಯಲ್ಲಿಯೇ ‘ಸಿರಿಧಾನ್ಯದಿಂದ ಮೈಕ್ರೋಚಿಪ್’ ವರೆಗೆ ಎಂಬ ವಿಷಯವನ್ನು ಪರಿಣಿತರ ಸಮಿತಿ ಒಮ್ಮತದಿಂದ ಅಂತಿಮಗೊಳಿಸಿತು.
ವಿಷಯ ಆಯ್ಕೆ ಬಳಿಕ ಅದನ್ನು ವಿವಿಧ ಸ್ತರಗಳಲ್ಲಿ ನಿರೂಪಿಸುವ ಕೆಲಸ ಕೈಗೊಳ್ಳಲಾಯಿತು. ಕರ್ನಾಟಕದ ಹಿರಿಮೆ, ಸಂಸ್ಕೃತಿ ಹಾಗೂ ಅಭಿವೃದ್ಧಿಯ ಮಹತ್ವವನ್ನು ಎತ್ತಿಹಿಡಿಯುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರೋತ್ಸಾಹದ ನುಡಿಗಳು ಈ ಮಹತ್ವದ ಕಾರ್ಯಕ್ಕೆ ಮುನ್ನುಡಿಯಾದವು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಬಿ.ಬಿ. ಕಾವೇರಿ ಅವರ ಸಲಹೆ–ಸೂಚನೆಗಳು ಸ್ತಬ್ಧಚಿತ್ರದ ಕೆಲಸವನ್ನು ಸುಗಮಗೊಳಿಸಿತು.
ಸ್ತಬ್ಧಚಿತ್ರದ ವೈಶಿಷ್ಟ್ಯಗಳು: ಸ್ತಬ್ಧಚಿತ್ರದ ಮುಂಭಾಗದಲ್ಲಿ ಉದಯಿಸುತ್ತಿರುವ ಸೂರ್ಯ ನಿರಂತರ ಪ್ರಗತಿಯ ಸಂಕೇತವಾಗಿ ಕಾಣಿಸುತ್ತದೆ. ದೊಡ್ಡ ಮಡಿಕೆಗಳಲ್ಲಿ ಪ್ರದರ್ಶಿಸಲಾದ ವಿವಿಧ ಸಿರಿಧಾನ್ಯಗಳು ಕೃಷಿ ಸಮೃದ್ಧಿಯನ್ನು ತೋರಿಸುತ್ತವೆ. ಬೆಳೆದ ಫಸಲನ್ನು ಎತ್ತಿಹಿಡಿದಿರುವ ರೈತ, ಆತನ ಪತ್ನಿ ಹಾಗೂ ಉಲ್ಲಾಸದಿಂದ ಕಾಣಿಸುತ್ತಿರುವ ಮಕ್ಕಳು ಗ್ರಾಮೀಣ ಶಕ್ತಿಯ ಜೀವಂತ ಚಿತ್ರಣವಾಗಿದ್ದಾರೆ.
ಮಧ್ಯಭಾಗದಲ್ಲಿ ತಿರುಗುತ್ತಿರುವ ಅಣುವಿನ ಮಾಲಿಕ್ಯೂಲ್ ಮಾದರಿ ತಂತ್ರಜ್ಞಾನ ಪ್ರಗತಿಯನ್ನು ಸೂಚಿಸುತ್ತದೆ. ಕೃತಕ ಬುದ್ಧಿಮತ್ತೆಯ ರೋಬೋಟ್ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಭವಿಷ್ಯದ ಆವಿಷ್ಕಾರಗಳ ಸಂಕೇತವಾಗಿದೆ. ಇಕ್ಕೆಲಗಳಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ಪ್ರತಿನಿಧಿಸುವ ರಾಕೆಟ್ ಮತ್ತು ವಿಜ್ಞಾನಿ, ಟೆಲಿಮೆಡಿಸಿನ್ ಮೂಲಕ ಮಾರ್ಗದರ್ಶನ ನೀಡುತ್ತಿರುವ ವೈದ್ಯೆ ಹಾಗೂ ಕೃಷಿಭೂಮಿಯಲ್ಲಿ ಡ್ರೋನ್ ಬಳಸುತ್ತಿರುವ ಮಹಿಳೆಯು ವಿಜ್ಞಾನ, ಆರೋಗ್ಯ ಮತ್ತು ಆಧುನಿಕ ಕೃಷಿಯ ಸಮನ್ವಯವನ್ನು ತೋರಿಸುತ್ತಾರೆ.

ಕೈಗಾರಿಕಾ ವಲಯವನ್ನು ಪ್ರತಿನಿಧಿಸುವಂತೆ ಯಂತ್ರೋಪಕರಣಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಉತ್ಪಾದನಾ ಶಕ್ತಿಗೆ ಸಾಕ್ಷಿಯಾಗಿದ್ದಾರೆ.
ಸ್ತಬ್ಧಚಿತ್ರದ ಕೊನೆಯಲ್ಲಿ ಮಿನುಗುತ್ತಿರುವ ಮೈಕ್ರೋಚಿಪ್ ಹಾಗೂ ಬಂಗಾರದ ಬಣ್ಣದ ಸರ್ಕ್ಯೂಟ್‌ಗಳ ಮಧ್ಯೆ ರೋಬೋಟ್ ಮುಖವನ್ನು ಸಾಂಕೇತಿಕವಾಗಿ ಚಿತ್ರಿಸಲಾಗಿದೆ. ಇದು ಪರಂಪರೆಯಿಂದ ಪ್ರಗತಿಯತ್ತ, ಮಣ್ಣಿನಿಂದ ಯಂತ್ರಗಳತ್ತ ಸಾಗುತ್ತಿರುವ ಕರ್ನಾಟಕದ ಆತ್ಮನಿರ್ಭರ ಪಯಣದ ಸಾರವಾಗಿದೆ.








