Submission of Gender Minority Survey Report: Recommendations for Education, Health, Employment, Skill Training
ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಬಹುನಿರೀಕ್ಷಿತ 2025–26ನೇ ಸಾಲಿನ ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸ್‌ಜೆಂಡರ್) ಮೂಲ ಹಂತದ ಸಮೀಕ್ಷಾ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

ರಾಜ್ಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿ ಹಾಗೂ ಅವರ ಹಕ್ಕುಗಳ ರಕ್ಷಣೆಗೆ ಈಗಿರುವ ಕಾರ್ಯಕ್ರಮಗಳು, ಪುನರ್ವಸತಿ ಮತ್ತು ಸಬಲೀಕರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿಯಲ್ಲಿ ವಿಸ್ತೃತ ಶಿಫಾರಸ್ಸುಗಳನ್ನು ಮಾಡಲಾಗಿದೆ.


ಮುಖ್ಯ ಶಿಫಾರಸ್ಸುಗಳು:
•ವಸತಿ ನಿಲಯಗಳಲ್ಲಿ ಆದ್ಯತೆಯ ಮೇರೆಗೆ ದಾಖಲಾತಿ
ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳಿಗೆ ವಿದ್ಯಾರ್ಥಿ ವೇತನ
•ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ
•ಆರೋಗ್ಯ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿ
•ವಸತಿ ಹಾಗೂ ಮೂಲಭೂತ ಸೌಕರ್ಯಗಳ ಒದಗಿಕೆ
ಲಿಂಗತ್ವ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಬೋರ್ಡ್ ಸ್ಥಾಪನೆ
•ಹಾಲಿ ಸರ್ಕಾರಿ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ಈ ವರ್ಗಕ್ಕೆ ವಿಸ್ತರಣೆ

ಮೂಲ ಹಂತದ ಸಮೀಕ್ಷೆಯ ಉದ್ದೇಶಗಳು:
1 ಭಯ, ಅವಮಾನ, ಲಿಂಗ ಹಾಗೂ ಸಾಮಾಜಿಕ ತಾರತಮ್ಯ, ಖಿನ್ನತೆ ಮತ್ತು ಆತ್ಮಹತ್ಯಾ ಪ್ರವೃತ್ತಿ ಮುಂತಾದ ಸಮಸ್ಯೆಗಳಿಂದ ಲಿಂಗತ್ವ ಅಲ್ಪಸಂಖ್ಯಾತರನ್ನು ಹೊರತರಲು ನೆರವು ನೀಡುವುದು.
2 ಇವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅಗತ್ಯ ಸೌಲಭ್ಯಗಳ ಒದಗಿಕೆ.
3 ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿಗೆ ಅಗತ್ಯವಾದ ಜನಸಂಖ್ಯಾ, ಶೈಕ್ಷಣಿಕ ಹಾಗೂ ಆರ್ಥಿಕ ಮಾಹಿತಿಯ ಸಂಗ್ರಹ.
4 ಮೂಲ ದತ್ತಾಂಶದ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಕ್ಕೆ ಬಲ ನೀಡುವುದು.
5 ಟ್ರಾನ್ಸ್‌ಜೆಂಡರ್‌ರ ವಿರುದ್ಧದ ದೌರ್ಜನ್ಯಗಳನ್ನು ತಡೆಯಲು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಕ್ರಮ.
6 ಎಲ್ಲಾ ಇಲಾಖೆಗಳ ಯೋಜನೆಗಳಲ್ಲಿ ಈ ವರ್ಗದ ಕಲ್ಯಾಣಕ್ಕೆ ಅಗತ್ಯ ಮಾಹಿತಿಯ ಬಳಕೆ ಹಾಗೂ ಕ್ಷೇಮಾಭಿವೃದ್ಧಿ ಬೋರ್ಡ್ ಸ್ಥಾಪನೆ.
ತರಬೇತಿ ಕಾರ್ಯಾಗಾರ:
•31 ಜಿಲ್ಲೆಗಳ ಸಮುದಾಯ ಆಧಾರಿತ ಸಂಸ್ಥೆಗಳ ಪ್ರತಿನಿಧಿಗಳಿಗೆ, ಮಾಸ್ಟರ್ ಟ್ರೈನರ್ಸ್ ಮತ್ತು ಸಮೀಕ್ಷಾದಾರರಿಗೆ ಹಂತ ಹಂತವಾಗಿ ತರಬೇತಿ ನೀಡಲಾಯಿತು.
•ಸಮೀಕ್ಷೆ ಪ್ರಾರಂಭಿಸಲು ಅಗತ್ಯ ಸಿಬ್ಬಂದಿಯನ್ನು ಗುರುತಿಸಲಾಯಿತು.
ಸ್ಥಿತಿಗತಿಗಳ ವಿಶ್ಲೇಷಣಾ ವರದಿ:
•2025–26ನೇ ಸಾಲಿನಲ್ಲಿ 31 ಜಿಲ್ಲೆಗಳಲ್ಲಿ 15 ಸೆಪ್ಟೆಂಬರ್ 2025 ರಿಂದ ಸಮೀಕ್ಷೆ ನಡೆಸಲಾಗಿದೆ.
•ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ 10,250 ಜನರು ಮತ್ತು 18 ವರ್ಷದೊಳಗಿನ 115 ಮಕ್ಕಳು ಸೇರಿ ಒಟ್ಟು 10,365 ಲಿಂಗತ್ವ ಅಲ್ಪಸಂಖ್ಯಾತರು ಇರುವುದಾಗಿ ತಿಳಿದು ಬಂದಿದೆ.
ಅತಿ ಹೆಚ್ಚು ಸಂಖ್ಯೆಯಿರುವ ಮೊದಲ 5 ಜಿಲ್ಲೆಗಳು:
1 ವಿಜಯಪುರ – 1,428
2 ಚಿಕ್ಕಬಳ್ಳಾಪುರ – 1,252
3 ಬೆಂಗಳೂರು ನಗರ – 757
4 ಕೋಲಾರ – 638
5 ಬೆಳಗಾವಿ – 618
ಸಮೀಕ್ಷೆಯಲ್ಲಿ ಸಾಮಾಜಿಕ ಸ್ಥಿತಿ, ಶಿಕ್ಷಣ, ವಾಸಸ್ಥಳ, ಕುಟುಂಬ ಸ್ವೀಕಾರ, ಉದ್ಯೋಗ ಮತ್ತು ಆದಾಯ, ಸರ್ಕಾರಿ ಸೌಲಭ್ಯಗಳ ಬಳಕೆ, ಮನೆ-ಭೂಮಿ ಹೊಂದಿಕೆ, ಆರೋಗ್ಯ, ಶಸ್ತ್ರಚಿಕಿತ್ಸೆ ಮಾಹಿತಿ, ಕೌಶಲ್ಯ ತರಬೇತಿ ಹಾಗೂ ಮೂಲಭೂತ ಸೌಕರ್ಯಗಳ ವಿವರಗಳನ್ನು ಸಂಗ್ರಹಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ರಾಜ್ಯದಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಅರಿಯಲು, ಪುನರ್ವಸತಿ ಕಲ್ಪಿಸಲು ಮತ್ತು ಸರ್ಕಾರದ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಒದಗಿಸಲು ಈ ಮೂಲ ಹಂತದ ಸಮೀಕ್ಷೆ ನಡೆಸಲಾಗಿದ್ದು, ವರದಿಯ ಆಧಾರದಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.








