
ಆನಂದಪುರ: ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಇಂದು ‘ಕೆಳದಿ ಯುವಜನೋತ್ಸವ-2026’ ಸಂಭ್ರಮದಿಂದ ಚಾಲನೆ ಪಡೆಯಿತು. ಹೆಗ್ಗೋಡು ನಿನಾಸಂ ನಿರ್ದೇಶಕರಾದ ಡಾ. ಎಂ. ಗಣೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಲೆಯ ಮೂಲಕ ಸಮಾಜದಲ್ಲಿ ಸೌಹಾರ್ದತೆ ಬೆಳೆಸುವ ಅಗತ್ಯವನ್ನು ಒತ್ತಿ ಹೇಳಿದರು.
ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಯಲಿ: ಡಾ. ಎಂ. ಗಣೇಶ್
ಕಾರ್ಯಕ್ರಮದುದ್ದಕ್ಕೂ ತಮ್ಮ ಭಾಷಣದಲ್ಲಿ ಕಲೆ ಮತ್ತು ಸಂಸ್ಕೃತಿಯ ಮಹತ್ವವನ್ನು ವಿವರಿಸಿದ ಡಾ. ಎಂ. ಗಣೇಶ್, “ನಾನು ರಂಗಭೂಮಿಯನ್ನು ಮಾಡುತ್ತೇನೆ ಹಾಗೂ ರಾಗಿಯನ್ನು ಸಹ ಬೆಳೆಯುತ್ತೇನೆ. ಇದು ಕೃಷಿ ಮತ್ತು ಕಲೆಯ ನಡುವಿನ ಅವಿನಾಭಾವ ಸಂಬಂಧವನ್ನು ತೋರಿಸುತ್ತದೆ,” ಎಂದರು.
ಇಂದಿನ ಸಮಾಜದಲ್ಲಿ ಯುದ್ಧ ಮತ್ತು ಸಂಘರ್ಷಗಳ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿದ್ದು, ಇಂತಹ ದುಷ್ಪ್ರವೃತ್ತಿಗಳನ್ನು ತೊಡೆದುಹಾಕಲು ‘ಕಲೆ’ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ. ವಿದ್ಯಾರ್ಥಿಗಳು ಸ್ಪರ್ಧೆಗಳ ಮೂಲಕ ಒಂದಾಗಿ ಬೆರೆತು, ಒಗ್ಗಟ್ಟು ಮತ್ತು ಸಹೋದರತ್ವವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಕೆಳದಿ ನೆಲವು ಸಂಸ್ಕೃತಿಯ ನೆಲಬೀಡು ಎಂದು ಅವರು ಶ್ಲಾಘಿಸಿದರು.



ವಿದ್ಯಾರ್ಥಿಗಳ ಪ್ರತಿಭೆಗೆ ಸಾಕ್ಷಿಯಾದ ಸಂಸ್ಕೃತಿ ಮೆರವಣಿಗೆ
‘ಕೆಳದಿ ಯುವಜನೋತ್ಸವ-2026’ರ ಅಂಗವಾಗಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಮೆರವಣಿಗೆಯಲ್ಲಿ ವಿವಿಧ ವೇಷಭೂಷಣಗಳೊಂದಿಗೆ ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿ.
ಯುವಜನೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಮೆರವಣಿಗೆ ಅತ್ಯಾಕರ್ಷಕವಾಗಿತ್ತು. ವಿದ್ಯಾರ್ಥಿಗಳು ಭಾರತದ ವಿವಿಧ ರಾಜ್ಯಗಳ ಮತ್ತು ಕರ್ನಾಟಕದ ಸಾಂಪ್ರದಾಯಿಕ ವೇಷಭೂಷಣಗಳನ್ನು ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕರ್ನಾಟಕದ ಸಾಂಪ್ರದಾಯಿಕ ಕಲೆಗಳಾದ ಯಕ್ಷಗಾನ, ಡೊಳ್ಳು ಕುಣಿತ ಮುಂತಾದವುಗಳನ್ನು ಪ್ರದರ್ಶಿಸಲಾಯಿತು, ಇದು ದೇಶದ ವೈವಿಧ್ಯತೆಯನ್ನು ಬಿಂಬಿಸಿತು.
ಪ್ರತಿಭೆಗೆ ಉತ್ತೇಜನ ನೀಡಲು ವಿಶ್ವವಿದ್ಯಾಲಯ ಬದ್ಧ: ಡಾ. ಹೇಮ್ಲಾ ನಾಯಕ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕರಾದ ಡಾ. ಹೇಮ್ಲಾ ನಾಯಕ್ ಮಾತನಾಡಿ, “ಯುವಜನೋತ್ಸವವು ವಿದ್ಯಾರ್ಥಿಗಳಿಗೆ ತಮ್ಮೊಳಗಿನ ಕಲಾವಿದನನ್ನು ಗುರುತಿಸಿಕೊಳ್ಳಲು ಮತ್ತು ಪ್ರದರ್ಶಿಸಲು ದೊರೆತ ಅತ್ಯುತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು,” ಎಂದರು.
ಗಣ್ಯರ ಉಪಸ್ಥಿತಿ: ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಡಾ. ಪಿ.ಕೆ. ಬಸವರಾಜ್, ಡಾ. ಬಿ.ಕೆ. ಕುಮಾರಸ್ವಾಮಿ, ಎಚ್.ಡಿ. ದೇವಿ ಕುಮಾರ್, ಡೀನ್‌ಗಳಾದ ಡಾ. ವಿ. ಶ್ರೀನಿವಾಸ್, ಡಾ. ಡಿ. ತಿಪ್ಪೇಶ್, ಆಸ್ತಿ ಅಧಿಕಾರಿ ಅವಿನಾಶ್, ಸಹ ಸಂಶೋಧಕ ನಿರ್ದೇಶಕ ಡಾ. ಎಸ್. ಪ್ರದೀಪ್, ಡಾ. ರವಿಕುಮಾರ್, ಡಾ. ರಾಮಕೃಷ್ಣ ಹೆಗಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬರಹ: ತಂಡ, vishwachetana.com









