ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಕಟಗಾರು ಗ್ರಾಮದ 29 ವರ್ಷದ ವ್ಯಕ್ತಿಯೊಬ್ಬರು ಮಂಗನ ಕಾಯಿಲೆ (ಕೆಎಫ್ಡಿ) ಸೋಂಕಿನಿಂದ ಮೃತಪಟ್ಟಿದ್ದಾರೆ.


ಜನವರಿ 20ರಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಜ್ವರದ ತೀವ್ರತೆ ಕಡಿಮೆಯಾಗಿರಲಿಲ್ಲ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಳೆದ ಭಾನುವಾರ ಉಡುಪಿ ಜಿಲ್ಲೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಬುಧವಾರ ಕೊನೆಯುಸಿರೆಳೆದಿದ್ದಾರೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಕಟಗಾರು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಜ್ವರದ ಲಕ್ಷಣ ಇರುವವರ ತಪಾಸಣೆ ನಡೆಸುವಂತೆ ಸೂಚಿಸಿದೆ. ಮಂಗಗಳು ಸತ್ತಿರುವುದು ಕಂಡುಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
(ಕೆಎಫ್ಡಿ ಸೋಂಕಿತರ ಹೆಸರುಗಳನ್ನು ಬಹಿರಂಗಪಡಿಸುವಂತಿಲ್ಲ)
ದಕ್ಷಿಣ ಕರ್ನಾಟಕದ ಕೆಲವು ಭಾಗಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಪ್ರದೇಶಗಳಲ್ಲಿ ಈ ರೋಗದ ಪ್ರಕರಣಗಳು ಪತ್ತೆಯಾಗುತ್ತಿವೆ ಮತ್ತು ಆರೋಗ್ಯ ಇಲಾಖೆ ನಿಗಾ ಹಾಗೂ ತಡೆ ಕಾರ್ಯಗಳನ್ನು ಜಾರಿಗೆ ತಂದಿದೆ.








