ಹೊಸನಗರ: ದೇಶದ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಬಾರತದೆಲ್ಲೆಡೆ ಆಚರಿಸುತ್ತಿದ್ದಾರೆ ಅದೇ ರೀತಿಯಲ್ಲಿ ಎಂ. ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ವತಿಯಿಂದ 77ನೇ ಗಣರಾಜ್ಯೋತ್ಸವದ ಅಂಗವಾಗಿ ಬುಧವಾರ ಬೆಳಿಗ್ಗೆ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಅವರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಿಶೇಷ ಎಂದರೆ ಸಿಬ್ಬಂದಿವರ್ಗದವರಿಗೆ ಸಮವಸ್ತ್ರ ವಿತರಿಸಲಾಯಿತು.

ಧ್ವಜಾರೋಹಣದ ಬಳಿಕ ಗ್ರಾಮ ಪಂಚಾಯತ್ ವತಿಯಿಂದ ಪ್ರಕಟಿಸಲಾದ 2026ನೇ ಸಾಲಿನ ಹೊಸ ವರ್ಷದ ಕ್ಯಾಲೆಂಡರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಈ ಕ್ಯಾಲೆಂಡರ್‌ನಲ್ಲಿ ಪಂಚಾಯತಿಯ ದೂರವಾಣಿ ಸಂಖ್ಯೆ, ಸಂಪರ್ಕ ವಿವರಗಳು, ಸರ್ಕಾರಿ ರಜಾದಿನಗಳ ಪಟ್ಟಿ, ಪ್ರಮುಖ ಸೇವೆಗಳ ಮಾಹಿತಿ ಸೇರಿದಂತೆ ಗ್ರಾಮಸ್ಥರಿಗೆ ಉಪಯುಕ್ತವಾಗುವ ಹಲವು ವಿವರಗಳನ್ನು ಒಳಗೊಂಡಿದೆ.
ಇದೇ ದಿನ ಮಧ್ಯಾಹ್ನ ಸಾಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಸನ್ಮಾನ್ಯ ಶಾಸಕರೂ ಹಾಗೂ ಅರಣ್ಯ ಕೈಗಾರಿಕಾ ನಿಗಮ ಮಂಡಳಿ ಅಧ್ಯಕ್ಷರೂ ಆಗಿರುವ ಶ್ರೀ ಗೋಪಾಲಕೃಷ್ಣ ಬೇಳೂರು ಅವರ ಸಮ್ಮುಖದಲ್ಲಿ ಕ್ಯಾಲೆಂಡರ್ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು. ಈ ವೇಳೆ ಶಾಸಕರು ಪಂಚಾಯತ್ ವತಿಯಿಂದ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿ, ಗ್ರಾಮ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸದಸ್ಯರು ಜನಪರವಾಗಿ ಕೆಲಸ ಮಾಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.


ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಮಾತನಾಡಿ, “ಈ ಕ್ಯಾಲೆಂಡರ್ ಪ್ರತಿಯೊಂದು ಮನೆಗೂ ತಲುಪುವಂತೆ ವಿತರಿಸಲಾಗುತ್ತದೆ. ಇದರ ಮೂಲಕ ಪಂಚಾಯತಿಯ ಸಂಪರ್ಕ ಸಂಖ್ಯೆ, ಸದಸ್ಯರ ವಿವರಗಳು, ರಜಾದಿನಗಳ ಮಾಹಿತಿ ಸೇರಿದಂತೆ ಅನೇಕ ಉಪಯುಕ್ತ ಮಾಹಿತಿಗಳನ್ನು ಜನರು ಸುಲಭವಾಗಿ ಪಡೆಯಬಹುದು. ಇದರಿಂದ ಸಾರ್ವಜನಿಕರು ಪಂಚಾಯತಿಯೊಂದಿಗೆ ನೇರ ಸಂಪರ್ಕ ಸಾಧಿಸಲು ಸಹಾಯಕವಾಗುತ್ತದೆ” ಎಂದು ತಿಳಿಸಿದರು.
ಅದೇ ವೇಳೆ ಅವರು 77ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಸಂದೇಶ ನೀಡಿ, “ಸರ್ವರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ವಿಭಿನ್ನತೆಯಲ್ಲಿ ಏಕತೆ ಎಂಬುದು ಭಾರತದ ಅಸಲಿ ಶಕ್ತಿ. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಶ್ರಮಿಸಬೇಕು” ಎಂದು ಹೇಳಿದರು.


ಪಂಚಾಯತ್ ಸದಸ್ಯರಾದ ಮಹೇಂದ್ರ ಬಿ.ಎನ್. ಮಾತನಾಡಿ, ಈ ಕ್ಯಾಲೆಂಡರ್ ಗ್ರಾಮಸ್ಥರಿಗೆ ಮಾರ್ಗದರ್ಶಿಯಂತೆ ಕಾರ್ಯನಿರ್ವಹಿಸಲಿದೆ. ಪಂಚಾಯತಿಯ ಎಲ್ಲಾ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪುವಂತೆ ಎಲ್ಲ ಸದಸ್ಯರು ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಧಾ, ಸದಸ್ಯರಾದ ಸವಿತಾ, ದಿವ್ಯ, ಕಾಂಗ್ರೆಸ್ ಮುಖಂಡರಾದ ಅಣ್ಣಪ್ಪ (ಎಂ.ಗುಡ್ಡೆಕೊಪ್ಪ), ಚೇತನ್ ದಾಸ್ (ಹೊಸಮನೆ), ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.









