ಹೊಸನಗರ: ಅಪ್ರಾಪ್ತ ಮಕ್ಕಳ ಆರೋಗ್ಯ ರಕ್ಷಣೆ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಪೊಲೀಸ್ ಅರಣ್ಯ ಸಂಚಾರಿ ದಳದ ಶ್ರೀಮತಿ ಎಂ.ಎಸ್. ಪ್ರಮೋದ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಈಡಿಗರ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಹದಿಹರೆಯದ ಮಕ್ಕಳ ವೈಯಕ್ತಿಕ ಶುಚಿತ್ವಕ್ಕೆ ತಾಯಂದಿರು ಮತ್ತು ಪೋಷಕರು ವಿಶೇಷ ಗಮನ ನೀಡಬೇಕು ಎಂದು ಕರೆ ನೀಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಶ್ರೀಮತಿ ಶಶಿಕಲಾ ಮಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಮೋಹನ್ ಜಿ. ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕ ಮುರುಳಿಧರ ಶೆಟ್ಟಿ, ಹೆದ್ದಾರಿ ಪುರ ಒಕ್ಕೂಟದ ಅಧ್ಯಕ್ಷ ರಾಮಣ್ಣ, ತೀರ್ಥಹಳ್ಳಿ ಬಾವಿಕೈಸರು ಆಯುರ್ವೇದ ಆಸ್ಪತ್ರೆಯ ಡಾ. ಬಿ.ಎನ್. ಸುಚಿತ್ರ, ಚಿತ್ರದುರ್ಗ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ಶ್ರೀಮತಿ ರತ್ನ ಸೇರಿದಂತೆ ಪ್ರಮುಖರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ ಮಹಿಳೆಯರಿಗಾಗಿ ರಂಗೋಲಿ, ಕರಕುಶಲ ಮತ್ತು ಪುಷ್ಪಗುಚ್ಛ ರಚನಾ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಯೋಜನಾಧಿಕಾರಿ ಆರ್. ಪ್ರದೀಪ್ ವರದಿ ವಾಚಿಸಿದರು. ಶ್ರೀಮತಿ ಶಾಂತಕುಮಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.








