15ನೇ ಹಣಕಾಸು ಆಯೋಗದ ಅನುದಾನ ತಕ್ಷಣ ಬಿಡುಗಡೆಗೆ ಸಚಿವ ಪ್ರಿಯಾಂಕ್ ಖರ್ಗೆ ಮನವಿ

Photo of author

By vishwachetana807@gmail.com

Rural Development and Panchayat Raj Minister Priyank Kharge appeals for immediate fund release

ಕರ್ನಾಟಕದ ಗ್ರಾಮ ಪಂಚಾಯತಿಗಳ ಪ್ರಸ್ತುತ ಅವಧಿ 2026ರ ಜನವರಿ–ಫೆಬ್ರವರಿ ತಿಂಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಅನುದಾನದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಗ್ರಾಮೀಣ ವಿಕೇಂದ್ರೀಕರಣದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಪಂಚಾಯತಿ ಮಟ್ಟದ ಆಡಳಿತವನ್ನು ಬಲಪಡಿಸಲು ಹಾಗೂ ಅವಧಿ ಮುಗಿಯುವ ಮೊದಲೇ ನಿರ್ಣಾಯಕ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರವು ಸಕಾಲಕ್ಕೆ ಅನುದಾನ ಬಿಡುಗಡೆ ಮಾಡುವುದು ಅತ್ಯಗತ್ಯವಾಗಿದೆ ಎಂದು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಕರ್ನಾಟಕದ ಗ್ರಾಮ ಪಂಚಾಯತಿಗಳಿಗೆ ಕೇಂದ್ರ ಸರ್ಕಾರದಿಂದ ಬಾಕಿ ಇರುವ 15ನೇ ಹಣಕಾಸು ಆಯೋಗದ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೇಂದ್ರ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.

2025–26ನೇ ಹಣಕಾಸು ವರ್ಷದ ಅನುದಾನ ಬಿಡುಗಡೆಯಲ್ಲಿನ ನಿರಂತರ ವಿಳಂಬ ಕುರಿತು 2025ರ ಡಿಸೆಂಬರ್ 08ರಂದು ಮೊದಲೇ ಪತ್ರ ಬರೆಯಲಾಗಿತ್ತು. 2025ರ ಆಗಸ್ಟ್ ತಿಂಗಳಲ್ಲೇ ಗ್ರಾಮ ಪಂಚಾಯತಿ ಅಭಿವೃದ್ಧಿ ಯೋಜನೆಗಳು (GPDPಗಳು) ಸಕಾಲಿಕವಾಗಿ ಅಪ್ಲೋಡ್ ಮಾಡಿರುವುದರ ಜೊತೆಗೆ, 2025ರ ಜುಲೈ 08 ಮತ್ತು ಸೆಪ್ಟೆಂಬರ್ 24ರಂದು ಅಗತ್ಯವಿರುವ ಅನುದಾನ ವರ್ಗಾವಣೆ ಪ್ರಮಾಣಪತ್ರಗಳನ್ನೂ ಸಲ್ಲಿಸಿದ್ದರೂ ಸಹ ಅನುದಾನ ಬಿಡುಗಡೆಯಾಗಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಗ್ರಾಮಗಳ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಬಾಕಿ ಇರುವ 15ನೇ ಹಣಕಾಸು ಆಯೋಗದ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವ ಮೂಲಕ ಗ್ರಾಮ ಪಂಚಾಯತಿಗಳನ್ನು ಸಬಲಗೊಳಿಸಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.

Leave a Comment