ರಿಪ್ಪನ್‌ಪೇಟೆ: ಇಲ್ಲಿನ ಸಮೀಪದ ಗರ್ತಿಕೆರೆ ವ್ಯಾಪ್ತಿಯಲ್ಲಿ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ.

ಮೃತನನ್ನು ಗರ್ತಿಕೆರೆ ಸಮೀಪದ ಸುಣ್ಣದಬಸ್ತಿ ಗ್ರಾಮದ ನಿವಾಸಿ ನಯಾಜ್ (30) ಎಂದು ಗುರುತಿಸಲಾಗಿದೆ. ಸುಣ್ಣದಬಸ್ತಿ ಬಸ್ ನಿಲ್ದಾಣದ ಬಳಿ ರಿಪ್ಪನ್‌ಪೇಟೆಯಿಂದ ಕೋಣಂದೂರು ಕಡೆಗೆ ಸಾಗುತ್ತಿದ್ದ ಜಂಬಿಟ್ಟಿಗೆ ಲಾರಿ ನಯಾಜ್ ಅವರ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಯಾಜ್ ಅವರು ತೀರ್ಥಹಳ್ಳಿಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತ್ತಿದ್ದ ಬಸ್‌ಗೆ ಪಾರ್ಸಲ್ ನೀಡಲು ರಸ್ತೆ ದಾಟುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.


ಘಟನಾ ಸ್ಥಳಕ್ಕೆ ಪಿಎಸ್‌ಐ ರಾಜು ರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.








