ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ದೊಡ್ಡ ಅಪಾಯ. ಕಾರು ಸಂಪೂರ್ಣ ಭಸ್ಮ.

ರಿಪ್ಪನ್ ಪೇಟೆ : ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಬೆಳ್ಳೂರು ಗ್ರಾಮದಲ್ಲಿ ಚಲಿಸುತ್ತಿದ್ದ ಓಮಿನಿ ಕಾರಿಗೆ ದಿಡೀರ್ ಬೆಂಕಿ ತಗುಲಿದ ಘಟನೆ ತಡರಾತ್ರಿ ನಡೆದಿದೆ. ಚಾಲಕನ ಚುರುಕುತನದಿಂದ ಕಾರನ್ನು ತಕ್ಷಣ ನಿಲ್ಲಿಸಿ ಹೊರಬಂದ ಪರಿಣಾಮ ದೊಡ್ಡ ಅನಾಹುತ ತಪ್ಪಿದೆ.
ಮಾಹಿತಿ ಪ್ರಕಾರ, ಕೋಣಂದೂರು ಸಮೀಪದ ಜಮಲಾಪುರದ ಶ್ರೀಕಾಂತ್ ಎಂಬ ವ್ಯಕ್ತಿಯು ಓಮಿನಿ ಕಾರಿನಲ್ಲಿ ಬೆಳ್ಳೂರು ಗ್ರಾಮದ ರಸ್ತೆ ಮೂಲಕ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿಕೊಂಡಿದೆ ಎನ್ನಲಾಗಿದೆ. ಪರಿಸ್ಥಿತಿ ಅರಿತ ಚಾಲಕ ತಕ್ಷಣವೇ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ತಾನು ಸೇರಿದಂತೆ ಕಾರಿನಲ್ಲಿದ್ದ ಮತ್ತೊಬ್ಬರನ್ನು ಕೂಡಲೇ ಕೆಳಗಿಳಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.


ಈ ವೇಳೆ ಕೆಲವೇ ಕ್ಷಣಗಳಲ್ಲಿ ಬೆಂಕಿ ಹೆಚ್ಚಾಗಿ ಕಾರಿನನ್ನೆಲ್ಲ ಆವರಿಸಿತು. ವಿಷಯ ತಿಳಿದ ಕೂಡಲೇ ಬೆಳ್ಳೂರು ಗ್ರಾಮದ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಕಣ್ಣೆದುರೇ ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದೆ.
ಘಟನೆ ವೇಳೆ ಕಾರಿನಲ್ಲಿ ಸ್ಫೋಟದಂತಹ ಶಬ್ದವೂ ಕೇಳಿಬಂದಿದ್ದು ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅದೃಷ್ಟವಶಾತ್ ಕಾರಿನಲ್ಲಿದ್ದವರು ಸಮಯಕ್ಕೆ ಸರಿಯಾಗಿ ಹೊರಬಂದ ಕಾರಣ ಯಾವುದೇ ಜೀವಹಾನಿ ಅಥವಾ ಗಾಯಗಳ ಪ್ರಕರಣ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.ಕಾರಿಗೆ ಬೆಂಕಿ ಹೇಗೆ ತಗುಲಿತು ಎಂಬ ಬಗ್ಗೆ ಇನ್ನಷ್ಟೇ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದ್ದು, ತಾಂತ್ರಿಕ ದೋಷವೇ ಕಾರಣವಾಗಿರಬಹುದೆಂದು ಸ್ಥಳೀಯರು ಶಂಕಿಸಿದ್ದಾರೆ. ಸ್ಪಷ್ಟ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ಬರಹ: ತಂಡ, vishwachetana.com









