ರಸ್ತೆ ಸುರಕ್ಷತೆ ಎಲ್ಲರ ಜವಾಬ್ದಾರಿ — ಅಪಘಾತ ತಡೆಯಲು ಪೊಲೀಸ್ ಇಲಾಖೆಯ ಜಾಗೃತಿ ಕ್ರಮ

Photo of author

By vishwachetana807@gmail.com

ರಾತ್ರಿ ಹಾಗೂ ಮಳೆಗಾಲದ ಅಪಘಾತ ತಡೆಗೆ ರಸ್ತೆ ಪಕ್ಕದ ಮರಗಳಿಗೆ ರೇಡಿಯಮ್ ಸ್ಟಿಕರ್ ಅಂಟಿಕೆ — ಸಾರ್ವಜನಿಕ ಸಹಕಾರಕ್ಕೆ ಪೊಲೀಸ್ ಮನವಿ

ರಿಪ್ಪನ್ ಪೇಟೆ :ಶಿವಮೊಗ್ಗ–ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸುತ್ತಿರುವ ನಡುವೆ, ರಿಪ್ಪನ್ ಪೇಟೆ ಪೊಲೀಸ್ ಇಲಾಖೆ ರಸ್ತೆ ಸುರಕ್ಷತೆ ಕುರಿತಂತೆ ಮಹತ್ವದ ಜಾಗೃತಿ ಕ್ರಮ ಕೈಗೊಂಡಿದೆ.

ವಿಶೇಷವಾಗಿ ರಾತ್ರಿ ಸಮಯ, ಮಂಜು ಹಾಗೂ ಮಳೆಗಾಲದಲ್ಲಿ ವಾಹನ ಚಾಲಕರಿಗೆ ರಸ್ತೆ ಬದಿ ಸ್ಪಷ್ಟವಾಗಿ ಕಾಣಿಸದಿರುವುದೇ ಅನೇಕ ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ಹಿನ್ನಲೆಯಲ್ಲಿ ಸೋಡೂರು ದಿಂದ 9 ಎಂ ಎಸ್ ವರೆಗೆ ಹೆದ್ದಾರಿಯ ಎರಡೂ ಬದಿಯ ರಸ್ತೆ ಪಕ್ಕದಲ್ಲಿರುವ ಮರಗಳಿಗೆ ರೇಡಿಯಮ್ (ರೆಫ್ಲೆಕ್ಟರ್) ಸ್ಟಿಕರ್‌ಗಳನ್ನು ಅಂಟಿಸಿ, ದಾರಿಯ ಗಡಿ ಹಾಗೂ ತಿರುವುಗಳು ಸ್ಪಷ್ಟವಾಗಿ ಕಾಣುವಂತೆ ಮಾಡಲಾಗಿದೆ.

ಈ ಕ್ರಮದಿಂದ ವೇಗ ನಿಯಂತ್ರಣ, ಎಚ್ಚರಿಕೆಯಿಂದ ಚಾಲನೆ ಮತ್ತು ಸಮಯೋಚಿತ ತಿರುವು ಪಡೆಯಲು ವಾಹನ ಚಾಲಕರಿಗೆ ಸಹಕಾರಿಯಾಗಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಈ ಜಾಗೃತಿ ಹಾಗೂ ಸುರಕ್ಷತಾ ಕಾರ್ಯಾಚರಣೆಯನ್ನು ಸರ್ಕಲ್ ಇನ್ಸ್ಪೆಕ್ಟರ್ ಗೌಡಪ್ಪ ಗೌಡರ್, ಪಿಎಸ್ಐ ರಾಜು ರೆಡ್ಡಿ, ಎಎಸ್ಐ ಹಾಲಪ್ಪ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿ ನೆರವೇರಿಸಿದರು.

ಪೊಲೀಸ್ ಇಲಾಖೆಯ ಮನವಿ:
•ರಾತ್ರಿ ಸಮಯದಲ್ಲಿ ನಿಧಾನಗತಿಯಲ್ಲಿ ವಾಹನ ಚಾಲನೆ ಮಾಡಿ
•ಹೆದ್ದಾರಿಯಲ್ಲಿ ಓವರ್‌ಟೇಕ್ ಮಾಡುವಾಗ ಎಚ್ಚರಿಕೆ ವಹಿಸಿ
•ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ
•ಹೆಲ್ಮೆಟ್ ಹಾಗೂ ಸೀಟ್‌ಬೆಲ್ಟ್ ಕಡ್ಡಾಯವಾಗಿ ಬಳಸಿ

ಇನ್ನು ಮುನ್ನೆಚ್ಚರ ಕಾರ್ಯಕ್ರಮಗಳು

ರಸ್ತೆ ಅಪಘಾತಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಡೆಯುವ ಉದ್ದೇಶದಿಂದ ರಿಪ್ಪನ್ ಪೇಟೆ ಪೊಲೀಸ್ ಇಲಾಖೆ ಮುಂದಿನ ದಿನಗಳಲ್ಲಿ ಈ ಕೆಳಗಿನ ಮುನ್ನೆಚ್ಚರ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಿದೆ:

•ಅಪಘಾತ ಪ್ರವಣ ಪ್ರದೇಶಗಳಲ್ಲಿ ಹೆಚ್ಚುವರಿ ರೇಡಿಯಮ್ ಬೋರ್ಡ್ ಹಾಗೂ ಕ್ಯಾಟ್‌ಐ ರೆಫ್ಲೆಕ್ಟರ್‌ಗಳ ಅಳವಡಿಕೆ
•ರಾತ್ರಿ ಸಮಯದಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ವಿಶೇಷ ಪೆಟ್ರೋಲಿಂಗ್
•ಕಾಲೇಜು, ಶಾಲೆ ಹಾಗೂ ಗ್ರಾಮ ಮಟ್ಟದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳು
•ಹೆಲ್ಮೆಟ್, ಸೀಟ್‌ಬೆಲ್ಟ್ ಬಳಕೆ ಕುರಿತು ಕಠಿಣ ತಪಾಸಣೆ ಮತ್ತು ಅರಿವು ಮೂಡಿಕೆ
•ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ನಿರಂತರ ತಪಾಸಣೆ
•ತಿರುವು ಮತ್ತು ಸೇತುವೆ ಬಳಿ ಎಚ್ಚರಿಕಾ ಸೂಚನಾ ಫಲಕಗಳ ಅಳವಡಿಕೆ

ರಸ್ತೆ ಅಪಘಾತಗಳನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ಮಾತ್ರವಲ್ಲ, ಸಾರ್ವಜನಿಕರ ಸಹಕಾರವೇ ಮುಖ್ಯ ಎಂಬ ಸಂದೇಶವನ್ನು ಈ ಕ್ರಮ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಪೊಲೀಸ್ ಇಲಾಖೆಯ ಈ ಜನಜಾಗೃತಿ ಹಾಗೂ ಮುನ್ನೆಚ್ಚರಿಕಾ ಕಾರ್ಯಕ್ಕೆ ಸ್ಥಳೀಯ ನಾಗರಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Leave a Comment