ಸಾಗರ: ಮಲೆನಾಡಿನ ಸುಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆಯ ಅಂಗವಾಗಿ ಆಯೋಜಿಸಲಾಗುವ ಸಾಂಪ್ರದಾಯಿಕ ಜನಪದ ಕ್ರೀಡೆ ‘ಕುಸ್ತಿ ಪಂದ್ಯಾವಳಿ’ಗೆ ಈ ಬಾರಿ ಅದ್ದೂರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಫೆಬ್ರವರಿ 6ರಿಂದ 8ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಈ ಕ್ರೀಡಾಕೂಟವು ಕ್ರೀಡಾಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಮಣ್ಣಿನ ಅಖಾಡದಲ್ಲಿ ರಾಷ್ಟ್ರಮಟ್ಟದ ಪೈಲ್ವಾನರ ಕಾದಾಟ:
ನಗರದ ನೆಹರೂ ಮೈದಾನದಲ್ಲಿ ನಿರ್ಮಿಸಲಾಗಿರುವ ಸಾಂಪ್ರದಾಯಿಕ ಮಣ್ಣಿನ ಅಖಾಡದಲ್ಲಿ ಪ್ರತಿದಿನ ಮಧ್ಯಾಹ್ನ 3 ಗಂಟೆಗೆ ಕುಸ್ತಿ ಪಂದ್ಯಗಳು ಆರಂಭವಾಗಲಿವೆ. ಈ ಬಾರಿಯ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪೈಲ್ವಾನರಷ್ಟೇ ಅಲ್ಲದೆ, ರಾಷ್ಟ್ರ ರಾಜಧಾನಿ ದೆಹಲಿ, ಹರಿಯಾಣ ಹಾಗೂ ಮಹಾರಾಷ್ಟ್ರದ ಖ್ಯಾತ ಮಲ್ಲರು ಭಾಗವಹಿಸಿ ತಮ್ಮ ಶಕ್ತಿ ಮತ್ತು ತಂತ್ರಗಳನ್ನು ಪ್ರದರ್ಶಿಸಲಿದ್ದಾರೆ.
ಗೌರವ ಮತ್ತು ಬಹುಮಾನಗಳು:
ಅಖಾಡದಲ್ಲಿ ಅಪ್ರತಿಮ ಪ್ರದರ್ಶನ ನೀಡುವ ವಿಜೇತ ಪೈಲ್ವಾನರಿಗೆ ನಗದು ಬಹುಮಾನದೊಂದಿಗೆ ಬೆಳ್ಳಿಯ ಗದೆ, ಬಂಗಾರ ಹಾಗೂ ಬೆಳ್ಳಿಯ ಬಳೆಗಳನ್ನು ನೀಡಿ ಗೌರವಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಪಂದ್ಯಾವಳಿಯ ಸುಸಂಘಟಿತ ನಿರ್ವಹಣೆಗಾಗಿ ಈಗಾಗಲೇ ಪ್ರತ್ಯೇಕ ಸಮಿತಿಯನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.


ಕಟ್ಟುನಿಟ್ಟಿನ ನಿಯಮ ಮತ್ತು ಸುರಕ್ಷತೆ:
ಕುಸ್ತಿಗೆ ತನ್ನದೇ ಆದ ಶಿಸ್ತು ಮತ್ತು ನಿಯಮಗಳಿದ್ದು, ಎದುರಾಳಿಯ ಬೆನ್ನು ಅಖಾಡದ ಮಣ್ಣಿಗೆ ತಾಗಿಸಿದ ಪೈಲ್ವಾನರನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಹಿರಿಯ ಪೈಲ್ವಾನರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದು, ಕ್ರೀಡಾಪಟುಗಳ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ ಎಂದು ಗುರುತಿಸಲಾದ ಕೊಕ್ಕರೆ, ಮಕಪಟ್ಟಿ ಮತ್ತು ಸವಾರಿ ಪಟ್ಟುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸಾಗರದ ಅಖಾಡಕ್ಕಿದೆ ವಿಶಿಷ್ಟ ಅಭಿಮಾನ:
ಪ್ರತಿ ವರ್ಷ ಸಾವಿರಾರು ಕುಸ್ತಿ ಅಭಿಮಾನಿಗಳು ಅಖಾಡಕ್ಕೆ ಹರಿದುಬಂದು ಪೈಲ್ವಾನರನ್ನು ಹುರಿದುಂಬಿಸುವುದು ಮಾರಿಕಾಂಬಾ ಜಾತ್ರೆಯ ಪ್ರಮುಖ ಆಕರ್ಷಣೆ. ಉತ್ತಮ ಪ್ರದರ್ಶನ ನೀಡಿದರೂ ಸೋಲು ಕಂಡ ಪೈಲ್ವಾನರಿಗೆ ಪ್ರೇಕ್ಷಕರೇ ಅಖಾಡದಲ್ಲೇ ನಗದು ಬಹುಮಾನ ನೀಡಿ ಗೌರವಿಸುವುದು ಇಲ್ಲಿನ ಕ್ರೀಡಾ ಸಂಸ್ಕೃತಿಯ ವಿಶಿಷ್ಟತೆಯಾಗಿದೆ.
ಬರಹ: ತಂಡ, vishwachetana.com









