Sagara News | Shivamogga District News | Karnataka Accident News

SAGARA: ಸಾಗರ ತಾಲ್ಲೂಕಿನ ಉಳ್ಳೂರು ಸಮೀಪದ ಮುಂಡಿಗೆಮಟ್ಟೆ ರಸ್ತೆಯಲ್ಲಿ ಭಾನುವಾರ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕ-ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆನಂದಪುರದಿಂದ ಸಾಗರದ ಕಡೆಗೆ ಸಾಗುತ್ತಿದ್ದ ಕಾರು ಮತ್ತು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ರಾತ್ರಿ ಸುಮಾರು 10.30ರ ವೇಳೆಗೆ ಈ ದುರ್ಘಟನೆ ನಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.


ಮೃತರನ್ನು ಪವಿತ್ರ (25) – ಸೊರಬ ತಾಲ್ಲೂಕಿನ ಮಳಲಗದ್ದೆ ಗ್ರಾಮದ ನಿವಾಸಿ ಮತ್ತು ವೀರೇಶ್ (25) – ಸಾಗರ ತಾಲ್ಲೂಕಿನ ತಡಗಳಲೆ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಇಬ್ಬರೂ ಆಪ್ತ ಸ್ನೇಹಿತರಾಗಿದ್ದು, ಆನಂದಪುರದಲ್ಲಿ ನಡೆದ ಸ್ನೇಹಿತರೊಬ್ಬರ ಶುಭ ಸಮಾರಂಭದಲ್ಲಿ ಭಾಗವಹಿಸಿ ಮರಳಿ ಸಾಗರಕ್ಕೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಆನಂದಪುರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ಯಾಂಟರ್ ಚಾಲಕನ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಪ್ರಾಥಮಿಕ ಕಾರಣ ಎನ್ನಲಾಗುತ್ತಿದ್ದು, ಪ್ರಕರಣ ದಾಖಲಾಗಿದೆ.








