ಪೊಲೀಸ್ ಇಲಾಖೆ–ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮಾನವೀಯ ಸೇವೆ
ಶಿರಾಳಕೊಪ್ಪ: ದಿನಾಂಕ 10-01-2026 ರಂದು ಶಿರಾಳಕೊಪ್ಪ ಪೊಲೀಸ್ ಠಾಣೆ ಹಾಗೂ ವಿವಿಧ ಸಂಘ–ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ, ಶಿವಮೊಗ್ಗ ಮೆಗ್ಗಾನ್ ರಕ್ತಕೇಂದ್ರದ ಸಹಯೋಗದಲ್ಲಿ ಶಿರಾಳಕೊಪ್ಪ ಪೊಲೀಸ್ ಠಾಣೆ ಆವರಣದಲ್ಲಿ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.

ಈ ರಕ್ತದಾನ ಶಿಬಿರದ ನೇತೃತ್ವವನ್ನು ಶಿರಾಳಕೊಪ್ಪ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪ್ರಶಾಂತ್ ವಹಿಸಿದ್ದರು. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ಒಟ್ಟು 62 ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.
ರಕ್ತದಾನವು ಅನೇಕ ಜೀವಗಳನ್ನು ಉಳಿಸುವ ಮಹತ್ವದ ಮಾನವೀಯ ಸೇವೆಯಾಗಿದ್ದು, ಇಂತಹ ಶಿಬಿರಗಳು ಸಮಾಜದಲ್ಲಿ ಸೇವಾ ಮನೋಭಾವವನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಸಬ್ ಇನ್ಸ್‌ಪೆಕ್ಟರ್ ಪ್ರಶಾಂತ್ ಅವರು ತಿಳಿಸಿದರು.

ಶಿವಮೊಗ್ಗ ಮೆಗ್ಗಾನ್ ರಕ್ತಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಗಳು ರಕ್ತದಾನ ಪ್ರಕ್ರಿಯೆಯನ್ನು ನಿಗದಿತ ವೈದ್ಯಕೀಯ ಮಾರ್ಗಸೂಚಿಗಳಂತೆ ಸುರಕ್ಷಿತವಾಗಿ ನಡೆಸಿದರು. ರಕ್ತದಾನಕ್ಕೂ ಮುನ್ನ ದಾನಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ನಂತರ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಲಾಯಿತು.
ಪೊಲೀಸ್ ಇಲಾಖೆ ಕೇವಲ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಲ್ಲದೆ, ಸಮಾಜಮುಖಿ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ ಎಂಬುದಕ್ಕೆ ಈ ರಕ್ತದಾನ ಶಿಬಿರ ಉತ್ತಮ ಉದಾಹರಣೆಯಾಗಿದೆ. ರಕ್ತದಾನ ಮಾಡಿದ ಎಲ್ಲ ದಾನಿಗಳಿಗೆ ಹಾಗೂ ಶಿಬಿರದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಯಿತು.









