ಶಿವಮೊಗ್ಗ: ನಗರದ ಹೊರವಲಯದ ಊರುಗಡೂರಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿ ಸಂಕೇತ್ (16) ಎಂಬಾತನ ಭೀಕರ ಕೊಲೆ ಪ್ರಕರಣ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದ್ದು, ಈ ಘಟನೆಯ ಹಿಂದೆ ಮಾದಕ ದ್ರವ್ಯ ಜಾಲದ ಕೈವಾಡವಿರುವ ಶಂಕೆಯಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಗಂಭೀರ ಆರೋಪ ಮಾಡಿದೆ.

ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂಕೇತ್, ಸೋಮವಾರ ಸಂಜೆ ವಿಶೇಷ ತರಗತಿ ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಊರುಗಡೂರಿನ ಬಳಿ ಅನ್ಯಕೋಮಿನ ನಾಲ್ವರು ಅಪ್ರಾಪ್ತ ವಿದ್ಯಾರ್ಥಿಗಳು ಸಂಕೇತ್ ಮೇಲೆ ಏಕಾಏಕಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ತೀವ್ರ ರಕ್ತಸ್ರಾವದಿಂದ ಬಾಲಕ ಮೃತಪಟ್ಟಿದ್ದಾನೆ. ಈ ಅಮಾನವೀಯ ಕೃತ್ಯ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದೆ.


ಡ್ರಗ್ಸ್ ದಂಧೆಯ ಕೈವಾಡದ ಶಂಕೆ:ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಅಪ್ರಾಪ್ತ ವಯಸ್ಸಿನ ಮಕ್ಕಳು ಇಷ್ಟು ಕ್ರೂರವಾಗಿ ಹತ್ಯೆ ಮಾಡಿರುವುದು ಆಘಾತಕಾರಿ. ಈ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿರುವ ಸಾಧ್ಯತೆಯಿದ್ದು, ಇವರಿಗೆ ಡ್ರಗ್ಸ್ ಪೂರೈಕೆ ಮಾಡುವ ದೊಡ್ಡ ಜಾಲವೇ ಶಿವಮೊಗ್ಗದಲ್ಲಿ ಸಕ್ರಿಯವಾಗಿರುವ ಸಂಶಯವಿದೆ,” ಎಂದು ಅವರು ತಿಳಿಸಿದ್ದಾರೆ.
ಮಕ್ಕಳಲ್ಲಿ ದ್ವೇಷದ ಮಾನಸಿಕತೆ: ಕೇವಲ ಹದಿನಾರರ ಹರೆಯದ ಬಾಲಕರಲ್ಲಿ ಕೊಲೆ ಮಾಡುವಷ್ಟು ದ್ವೇಷದ ಮಾನಸಿಕತೆಯನ್ನು ಬಿತ್ತುತ್ತಿರುವ ಶಕ್ತಿಗಳ ಬಗ್ಗೆಯೂ ಶರಣ್ ಪಂಪುವೆಲ್ ಆತಂಕ ವ್ಯಕ್ತಪಡಿಸಿದ್ದಾರೆ. “ಅಪ್ರಾಪ್ತ ಮಕ್ಕಳಲ್ಲಿ ಇಂತಹ ಹಿಂಸಾತ್ಮಕ ಪ್ರವೃತ್ತಿ ಬೆಳೆಯಲು ಕಾರಣರಾದವರು ಯಾರು? ಈ ಕೃತ್ಯದ ಹಿಂದೆ ಯಾವುದಾದರೂ ವ್ಯವಸ್ಥಿತ ಸಂಚಿದೆಯೇ ಎಂಬುದು ಪತ್ತೆಯಾಗಬೇಕಿದೆ,” ಎಂದು ಅವರು ಒತ್ತಾಯಿಸಿದ್ದಾರೆ.

ಉನ್ನತ ಮಟ್ಟದ ತನಿಖೆಗೆ ಆಗ್ರಹ: ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಕೇವಲ ಹಲ್ಲೆ ನಡೆಸಿದವರನ್ನಷ್ಟೇ ಅಲ್ಲದೆ, ಈ ಕೃತ್ಯದ ಹಿಂದಿರುವ ಪ್ರೇರಕ ಶಕ್ತಿಗಳನ್ನು ಮಟ್ಟಹಾಕಲು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
ಬರಹ: ತಂಡ, vishwachetana.com







