ಹೊಸನಗರ: ತಾಲೂಕಿನ ಸುಳುಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಶಕಗಳಿಂದ ನಿರೀಕ್ಷಿಸಲಾಗಿದ್ದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಇದೀಗ ಚಾಲನೆ ದೊರೆತಿದೆ. ಶಾಸಕರು ಹಾಗೂ ಸಂಸದರ ಅನುದಾನದಡಿ ಸೇತುವೆ, ರಸ್ತೆ ಹಾಗೂ ಬಸ್ ನಿಲ್ದಾಣ ಅಭಿವೃದ್ಧಿ ಕಾರ್ಯಗಳು ಆರಂಭವಾಗಿದ್ದು, ಈ ಭಾಗದಲ್ಲಿ ಅಭಿವೃದ್ಧಿ ಚಟುವಟಿಕೆಗಳು ವೇಗ ಪಡೆದುಕೊಂಡಿವೆ.



ಸೂಲದಮಕ್ಕಿ ಸೇತುವೆಗೆ ₹1 ಕೋಟಿ ಅನುದಾನ:
ಸೂಲದಮಕ್ಕಿ ಗ್ರಾಮಸ್ಥರ ಬಹುಕಾಲದ ಕನಸಾಗಿದ್ದ ಸುಸಜ್ಜಿತ ಸೇತುವೆ ನಿರ್ಮಾಣಕ್ಕೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ₹1 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿದ್ದಾರೆ. ಸೇತುವೆ ಪೂರ್ಣಗೊಂಡ ನಂತರ ತಾಲೂಕು ಕೇಂದ್ರ ಹೊಸನಗರ, ನಗರ ಹೋಬಳಿ, ರ್ಯಾವೆ ಹಾಗೂ ಅಂಡಗದೊಡೂರು ಗ್ರಾಮಗಳಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿದಂತಾಗಲಿದೆ. ಮಳೆಗಾಲದಲ್ಲಿ ಎದುರಾಗುತ್ತಿದ್ದ ಸಂಚಾರ ಸಮಸ್ಯೆಗೆ ಶೀಘ್ರವೇ ಪರಿಹಾರ ಸಿಗಲಿದೆ.

ರಸ್ತೆ ಹಾಗೂ ಬಸ್ ನಿಲ್ದಾಣ ಅಭಿವೃದ್ಧಿ:
ಇದೇ ವೇಳೆ ಸುಳುಗೋಡು ಗ್ರಾಮದ ದಾಸಯ್ಯನ ಮನೆ ರಸ್ತೆಯ ಅಭಿವೃದ್ಧಿಗೆ ಶಾಸಕರು ₹15 ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಉಳುಕೊಪ್ಪ ಬಸ್ ನಿಲ್ದಾಣದ ಅಭಿವೃದ್ಧಿಗೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಅನುದಾನ ಒದಗಿಸಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಯುವ ಮೋರ್ಚಾದ ಸಾಮಾಜಿಕ ಜಾಲತಾಣ ಪ್ರಮುಖ್ ನಿತಿನ್ ಯಡೂರು ತಿಳಿಸಿದ್ದಾರೆ.
ಗ್ರಾಮಸ್ಥರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಅಭಿವೃದ್ಧಿಗೆ ಮುನ್ನುಡಿ ಬರೆದ ಶಾಸಕ ಆರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ ಹಾಗೂ ತಾಪಂ ಮಾಜಿ ಸದಸ್ಯ ಮಂಜುನಾಥ ಬಂಕ್ರಿಬೀಡು ಅವರಿಗೆ ಗ್ರಾಮಸ್ಥರ ಪರವಾಗಿ ನಿತಿನ್ ಯಡೂರು ಕೃತಜ್ಞತೆ ಸಲ್ಲಿಸಿದ್ದಾರೆ.








