Thirthahalli: ತೀರ್ಥಹಳ್ಳಿಯಲ್ಲಿ ಕೈಗಾರಿಕಾ ಘಟಕ ಸ್ಥಾಪನೆಗಾಗಿ ಉಪವಾಸ ಸತ್ಯಾಗ್ರಹ

Photo of author

By vishwachetana807@gmail.com

ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಿ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಆಗ್ರಹಿಸಿ ಕಾರ್ಮಿಕರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ತೀರ್ಥಹಳ್ಳಿ ಕಾರ್ಮಿಕ ಹಿತ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ ಡಿ. ಗೌಡ ಹಾಗೂ ನಿರ್ದೇಶಕರ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಬೇಡಿಕೆ ಈಡೇರುವವರೆಗೆ ಸತ್ಯಾಗ್ರಹ ನಡೆಯುತ್ತಿದೆ.

ಹೋರಾಟಗಾರರು ಸರ್ಕಾರ, ತಾಲ್ಲೂಕು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಇದುವರೆಗೆ ತೀರ್ಥಹಳ್ಳಿಗೆ ಕೈಗಾರಿಕಾ ಘಟಕಗಳನ್ನು ತರಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ದಿನಾಂಕ 21-01-2026 ಬುಧವಾರ ಬೆಳಿಗ್ಗೆ 11 ಗಂಟೆಯಿಂದ ಉಪವಾಸ ಸತ್ಯಾಗ್ರಹದ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಪ್ರತಿ ವರ್ಷ ತಾಲ್ಲೂಕಿನಿಂದ ಪಿಯುಸಿ, ಪದವಿ ಹಾಗೂ ಇತರ ಶಿಕ್ಷಣ ಮುಗಿಸಿದ ಸಾವಿರಾರು ಯುವಕ-ಯುವತಿಯರು ಉದ್ಯೋಗಾವಕಾಶ ಇಲ್ಲದೆ ಅಲೆದಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೈಗಾರಿಕಾ ಘಟಕಗಳ ಸ್ಥಾಪನೆಯಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ ಇದುವರೆಗೆ ಯಾರೂ ಸೂಕ್ತ ಗಮನ ಹರಿಸಿಲ್ಲ ಎಂಬುದು ಅವರ ಅಸಮಾಧಾನವಾಗಿದೆ.

ಕಾರ್ಮಿಕ ಹಿತ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ ಡಿ. ಗೌಡ ಅವರು, ತಾಲ್ಲೂಕಿನ ಕಾರ್ಮಿಕರು, ನಿರುದ್ಯೋಗಿಗಳು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಈ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ಈ ವೇಳೆ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.

ಕರವೇ ಅಧ್ಯಕ್ಷ ಯಡೂರು ಸುರೇಂದ್ರ ಮಾತನಾಡಿ, ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕೈಗಾರಿಕಾ ಘಟಕಗಳ ಅಗತ್ಯತೆ ಅತ್ಯಂತ ತೀವ್ರವಾಗಿದೆ ಎಂದು ಹೇಳಿದರು. ಕಾರ್ಮಿಕರು ಒಗ್ಗಟ್ಟಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಈ ಹೋರಾಟ ಅಗತ್ಯವಾಗಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಈ ಹೋರಾಟಕ್ಕೆ ಬೆಂಬಲ ನೀಡಿದೆ. ಸರ್ಕಾರ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

Leave a Comment