ಶರಾವತಿ ತೀರದ ಉಮಾಮಹೇಶ್ವರ (ಉಮಾಪತಿ) ದೇವಸ್ಥಾನ – ಶೈವ–ವೈಷ್ಣವ ಸಾಮರಸ್ಯದ ಅಪರೂಪದ ತಾಣ

Photo of author

By vishwachetana807@gmail.com

ಹೊಸನಗರ : ತಾಲ್ಲೂಕಿನ ಜೀವನದಿ ಶರಾವತಿಯ ಬಲ ದಂಡೆಯ ನಿಸರ್ಗ ನಿರ್ಮಿತ ನಿರ್ಮಲ ಪರಿಸರದಲ್ಲಿ ನೆಲೆಸಿರುವ ಶ್ರೀ ಉಮಾಮಹೇಶ್ವರ (ಉಮಾಪತಿ) ದೇವಸ್ಥಾನವು ಪ್ರಮುಖ ಕಾರಣಿಕ ಕ್ಷೇತ್ರವಾಗಿ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಹಸಿರು ಕಾಡು, ನಿಶ್ಶಬ್ದ ವಾತಾವರಣ ಮತ್ತು ಪವಿತ್ರ ನದಿ ತೀರದ ಸಂಯೋಜನೆಯು ಈ ದೇವಾಲಯಕ್ಕೆ ವಿಶಿಷ್ಟ ದೈವಿಕ ಕಳೆಯನ್ನು ನೀಡಿದೆ.

ಐತಿಹ್ಯ ಮತ್ತು ದಂತಕಥೆ
ಈ ದೇವಾಲಯದ ಮಹಿಮೆ ಅದರ ಅಪೂರ್ವ ದಂತಕಥೆಯಲ್ಲಿ ಅಡಗಿದೆ. ಕೆಳದಿ ಅರಸರು ಬಿದನೂರು ನಗರವನ್ನು ಆಳುತ್ತಿದ್ದ ಶಿವಪ್ಪ ನಾಯಕನ ಕಾಲದಲ್ಲಿ, ದೂರದ ಊರಿನಿಂದ ಬಂದ ಉಮಾಪತಿ ಎಂಬ ವೈಷ್ಣವ ಪಂಥದ ಉಪ್ಪಿನ ವ್ಯಾಪಾರಿ ಬಿದನೂರಿನಲ್ಲಿ ವ್ಯಾಪಾರ ನಡೆಸುತ್ತಿದ್ದ. ಆಗ ನಗರ ಪ್ರವೇಶಕ್ಕೆ ಸಾಲಗೇರಿಯಲ್ಲಿ ಪರವಾನಗಿ ನೀಡುವ ಕೇಂದ್ರವಿದ್ದು, ಒಂದು ದಿನ ವ್ಯಾಪಾರಕ್ಕೆ ತೆರಳಲು ಉಮಾಪತಿ ಅಲ್ಲಿ ಕಾದು ಮಲಗಿದ್ದನು.

ಆ ರಾತ್ರಿ ಕನಸಿನಲ್ಲಿ ಅವನಿಗೆ ಪ್ರತ್ಯಕ್ಷವಾದ ಶಿವನು ತನ್ನಿಗಾಗಿ ಒಂದು ಗುಡಿ ಕಟ್ಟಿಸಬೇಕೆಂದು ಆದೇಶಿಸಿದನು. ಕನಸಿನಿಂದ ಎಚ್ಚೆತ್ತುಕೊಂಡ ಉಮಾಪತಿ, ಕ್ಷಣಮಾತ್ರವೂ ತಡಮಾಡದೆ ಅರಸ ಶಿವಪ್ಪ ನಾಯಕನ ಬಳಿ ಮನದಾಸೆಯನ್ನು ಬಿನ್ನಹ ಮಾಡಿಕೊಂಡನು. ಅರಸನ ಸಮ್ಮತಿ ಹಾಗೂ ಸಹಕಾರದೊಂದಿಗೆ ಸಾಲಗೇರಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು ಎಂಬುದು ಸ್ಥಳ ಪುರಾಣ.


ಅದರ ಫಲವಾಗಿ ಈ ದೇವಾಲಯವು ‘ಉಮಾಮಹೇಶ್ವರ’ ಅಥವಾ ‘ಉಮಾಪತಿ’ ದೇವಸ್ಥಾನ ಎಂಬ ಹೆಸರಿನಿಂದ ಪ್ರಸಿದ್ಧಿಯಾಯಿತು.

ಶೈವ–ವೈಷ್ಣವ ಸಾಮರಸ್ಯದ ತಾಣ
ಬಿದನೂರು ನಾಯಕರ ಆಡಳಿತ ಕಾಲದಲ್ಲಿ ಈ ಪ್ರದೇಶದಲ್ಲಿ ಶೈವ ಪಂಥದವರೇ ಹೆಚ್ಚು ವಾಸವಾಗಿದ್ದರು. ವೈಷ್ಣವ ಪಂಥದ ವ್ಯಾಪಾರಿ ಶಿವಾಲಯ ನಿರ್ಮಿಸಲು ಮುಂದಾದಾಗ ಶೈವ ಪಂಥದವರಿಂದ ವಿರೋಧ ವ್ಯಕ್ತವಾದರೂ, ಅದನ್ನು ಲೆಕ್ಕಿಸದೆ ಉಮಾಪತಿ ವೈಷ್ಣವ ಶೈಲಿಯಲ್ಲಿಯೇ ದೇವಾಲಯವನ್ನು ಕಟ್ಟಿಸಿದನು.ಆರಂಭದಲ್ಲಿ ವೈಷ್ಣವ ಪದ್ಧತಿಯಂತೆ ಪೂಜೆ ನಡೆಯಿತು.
ಕಾಲಕ್ರಮೇಣ ಇಲ್ಲಿ ಶೈವ ಮತ್ತು ವೈಷ್ಣವ ಎರಡೂ ಪಂಥಗಳ ಪದ್ಧತಿಯಲ್ಲಿ ಪೂಜೆ ನಡೆಯತೊಡಗಿತು. ಈ ದೇವಾಲಯವು ಸರ್ವಜನರ ಸಾಮರಸ್ಯದ ಸಂಕೇತವಾಗಿ ರೂಪುಗೊಂಡಿತು ಎಂದು ಸ್ಥಳ ಪುರಾಣ ತಿಳಿಸುತ್ತದೆ.

ಗರ್ಭಗುಡಿ ಮತ್ತು ದಶಾವತಾರ ಶಿಲ್ಪಗಳು
ದೇವಾಲಯದ ಗರ್ಭಗುಡಿಯಲ್ಲಿ ಆಕರ್ಷಕ ಶಿವಲಿಂಗ ಪ್ರತಿಷ್ಠಾಪಿತವಾಗಿದೆ. ಗರ್ಭಗುಡಿಯ ಸುತ್ತಲಿನ ಗೋಡೆಗಳಲ್ಲಿ ವಿಷ್ಣುವಿನ ದಶಾವತಾರಗಳ ವಿಶಿಷ್ಟ ಉಬ್ಬುಶಿಲ್ಪ ಕೆತ್ತನೆಗಳು ಮನಸೆಳೆಯುತ್ತವೆ.
ಶಿಲ್ಪ ಸಾಲುಗಳ ಮಧ್ಯಭಾಗದಲ್ಲಿ ಒಂದೇ ಕಲ್ಲಿನಲ್ಲಿ (ಏಕಶಿಲೆ) ಕೆತ್ತಲಾದ ಗಂಡು–ಹೆಣ್ಣು ರೂಪದ ಶಿಲ್ಪವನ್ನು ಶಿವ ಮತ್ತು ಮೋಹಿನಿ (ವಿಷ್ಣು ಅವತಾರ) ಎಂದು ಬಿಂಬಿಸಲಾಗಿದೆ. ಇದು ಹರಿಹರ ತತ್ವವನ್ನು — ಶಿವ ಮತ್ತು ವಿಷ್ಣು ಒಂದೇ ಎಂಬ ದಾರ್ಶನಿಕ ಕಲ್ಪನೆಯನ್ನು ಸ್ಪಷ್ಟವಾಗಿ ಪ್ರತಿಪಾದಿಸುತ್ತದೆ.

ಇತಿಹಾಸದ ಕಠಿಣ ಘಟ್ಟ
ಬಿದನೂರು ನಾಯಕರ ಸಂಸ್ಥಾನದ ಮೇಲೆ ದಂಡೆತ್ತಿ ಬಂದ ಟಿಪ್ಪು ಸುಲ್ತಾನನ ದಾಳಿಯಿಂದ ಬಿದನೂರು ನಗರ ದ್ವಂಸವಾಯಿತು. ಇದರ ಪರಿಣಾಮವಾಗಿ ಉನ್ನತ ಸ್ಥಿತಿಯಲ್ಲಿದ್ದ ಉಮಾಪತಿ ದೇವಾಲಯವೂ ಹಾನಿಗೊಳಗಾಗಿ ಹಾಳಾಯಿತು. ನಿತ್ಯ ಪೂಜೆಗೆ ಒಳಪಟ್ಟಿದ್ದ ವಿಶಿಷ್ಟ ಪಚ್ಚೆಲಿಂಗ ಕೂಡ ಮಾಯವಾಯಿತು.
ನಂತರ 1996ರಲ್ಲಿ ಗ್ರಾಮಸ್ಥರೆಲ್ಲ ಸೇರಿ ಲಿಂಗವನ್ನು ಪುನರ್‌ಪ್ರತಿಷ್ಠಾಪಿಸಿ ನಿತ್ಯ ಪೂಜೆಯನ್ನು ಪುನಾರಂಭಿಸಿದರು. ಇಂದಿಗೂ ಮಹಾಶಿವರಾತ್ರಿ ಹಬ್ಬವನ್ನು ಊರವರು ಸಂಭ್ರಮದಿಂದ ಆಚರಿಸುವುದು ಇಲ್ಲಿನ ಪ್ರಮುಖ ಪರಂಪರೆಯಾಗಿದೆ.

ವಾಸ್ತುಶಿಲ್ಪದ ವೈಶಿಷ್ಟ್ಯ
ಸಾ.ಶ. 15ನೇ ಶತಮಾನದಲ್ಲಿ ಕೆಳದಿ ಅರಸರಿಂದ ನಿರ್ಮಿತ ಈ ಉಮಾಮಹೇಶ್ವರ ದೇವಾಲಯವು ಕೆಳದಿ–ವಿಜಯನಗರ ಶೈಲಿಯ ಸುಂದರ ಮಾದರಿಯಾಗಿದೆ.

•ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ತೆರೆದ   ಮುಖಮಂಟಪವನ್ನು ಒಳಗೊಂಡಿದೆ.
•ಗರ್ಭಗೃಹ ಮತ್ತು ಅಂತರಾಳವನ್ನು ಮಂಚಬಂಧ ಮಾದರಿಯ ಅಧಿಷ್ಠಾನದ ಮೇಲೆ ನಿರ್ಮಿಸಲಾಗಿದೆ.
•ಅಧಿಷ್ಠಾನದ ಮೇಲಿರುವ ಗೋಡೆಗಳಲ್ಲಿ ಆಳವಿಲ್ಲದ ಕಮಾನುಗಳಿರುವ ಕೋಷ್ಠಕಗಳಲ್ಲಿ ಬುದ್ಧ ಮತ್ತು ಕಲ್ಕಿಯೂ ಸೇರಿ ದಶಾವತಾರ ಶಿಲ್ಪಗಳು ಕೆತ್ತಲಾಗಿದೆ.
•ಮುಖಮಂಟಪಕ್ಕೆ ಅಧಿಷ್ಠಾನವಿಲ್ಲ.
•ಸಿಂಹಮುಖ ಮತ್ತು ಹೂಬಳ್ಳಿಗಳ ಅಲಂಕಾರ ಹೊಂದಿದ ಎರಡು ಚತುರಸ್ರ ಕಂಬಗಳು ಇವೆ.
•ಇವು ಇಳಿಜಾರಿನಿಂದ ಕೂಡಿದ ಹೆಂಚಿನ ಛಾವಣೆಯನ್ನು ಬೆಂಬಲಿಸುತ್ತವೆ.
•ಛಾವಣಿಯು ಪದ್ಮಮಂಡಲ ಅಲಂಕಾರದಿಂದ ಶೋಭಿತವಾಗಿದೆ.
•ಮುಖಮಂಟಪದಲ್ಲಿ ಅಷ್ಟದಿಕ್ಷಾಪಾಲಕರ ಶಿಲ್ಪಗಳಿರುವ ಭುವನೇಶ್ವರಿ ಇದೆ.
•ಗರ್ಭಗೃಹದ ದ್ವಾರಬಂಧವು ಸರಳವಾಗಿದ್ದು, ಲಲಾಟಬಿಂಬದಲ್ಲಿ ಶಿವಲಿಂಗ, ಗಣೇಶ ಮತ್ತು ದೇವಿ ಹಾಗೂ ಅವರ ವಾಹನಗಳಾದ ಮೂಷಿಕ ಮತ್ತು ಸಿಂಹ ಶಿಲ್ಪಗಳು ಕಾಣಿಸುತ್ತವೆ.
•ಅಂತರಾಳದ ದ್ವಾರಬಂಧದಲ್ಲಿ ಶೈವ ದ್ವಾರಪಾಲಕರು ಮತ್ತು ಗಜಲಕ್ಷ್ಮಿ ಶಿಲ್ಪಗಳು ಅಲಂಕೃತವಾಗಿವೆ.
•ದ್ವಾರಬಂಧದ ಎರಡೂ ಬದಿಗಳಲ್ಲಿ ನೇತಾಡುವ ಹೂಮೊಗ್ಗಿನ ಮಾಲೆಗಳ ಅಲಂಕಾರ ವಿಶೇಷ ಆಕರ್ಷಣೆಯಾಗಿದೆ.

ಸ್ಥಳ ಮತ್ತು ಪ್ರವೇಶ
ಹೊಸನಗರ ಪಟ್ಟಣ ದಿಂದ ಉಮಾಮಹೇಶ್ವರ (ಉಮಾಪತಿ) ದೇವಸ್ಥಾನವು ಸುಮಾರು 5 ಕಿಲೋಮೀಟರ್ ದೂರದಲ್ಲಿದ್ದು, ರಸ್ತೆ ಮಾರ್ಗವಾಗಿ ಸುಲಭವಾಗಿ ಹೋಗಿ ಬರಲು ವಾಹನ ಸೌಲಭ್ಯ ಲಭ್ಯವಿದೆ.

Leave a Comment