ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಅವರಗುಪ್ಪ ಗ್ರಾಮದಲ್ಲಿ ನಡುರಾತ್ರಿ ಕೌಟುಂಬಿಕ ಕಲಹ ತಾರಕಕ್ಕೇರಿ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ಮಗಳನ್ನು ಬಲವಂತವಾಗಿ ಕರೆದೊಯ್ಯಲು ಬಂದ ತಂಡವನ್ನು ತಡೆಯಲು ಹೋದ ಚಿಕ್ಕಪ್ಪನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.


ಮೃತರನ್ನು ಅವರಗುಪ್ಪ ನಿವಾಸಿ ಹಾಗೂ ವಾಹನ ಚಾಲಕ ವಸಂತ ನಾಯ್ಕ (38) ಎಂದು ಗುರುತಿಸಲಾಗಿದೆ. ದಾಳಿಯಲ್ಲಿ ವಸಂತ ಅವರ ಅಣ್ಣ ಮಹೇಶ್ ನಾಯ್ಕ ಹಾಗೂ ಕುಮಾರ್ ಎಂಬವರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವರದಿಗಳ ಪ್ರಕಾರ, ಮಹೇಶ್ ನಾಯ್ಕ ಅವರ ಪತ್ನಿ ಸುಚಿತ್ರಾ ಅವರು ಶಿವಮೊಗ್ಗದ ಜ್ಯೋತಿಷಿ ಕಮಲಾಕರ ಭಟ್ ಅವರ ಪ್ರಭಾವಕ್ಕೆ ಒಳಗಾಗಿ ಕೆಲಕಾಲದಿಂದ ಕುಟುಂಬದಿಂದ ದೂರವಾಗಿದ್ದರು. ಇತ್ತೀಚೆಗೆ ಇವರ ಮಗಳು ತಾಯಿಯ ನಡವಳಿಕೆಯಿಂದ ಬೇಸತ್ತು ತಂದೆಯ ಮನೆಗೆ ಬಂದು ವಾಸವಾಗಿದ್ದಳು.

ಫೆಬ್ರವರಿ 2ರ ತಡರಾತ್ರಿ ಸುಚಿತ್ರಾ, ಕಮಲಾಕರ ಭಟ್ ಮತ್ತು ಕೆಲ ಬಾಡಿಗೆ ಗೂಂಡಾಗಳು ಕಾರಿನಲ್ಲಿ ಅವರಗುಪ್ಪಕ್ಕೆ ಬಂದು ಮಗಳನ್ನು ಬಲವಂತವಾಗಿ ಕರೆದೊಯ್ಯಲು ಯತ್ನಿಸಿದ್ದಾರೆ. ಈ ವೇಳೆ ಅಡ್ಡಬಂದ ವಸಂತ ನಾಯ್ಕ ಅವರ ಮೇಲೆ ಚಾಕುವಿನಿಂದ ಎದೆ ಹಾಗೂ ಹೊಟ್ಟೆ ಭಾಗದಲ್ಲಿ ಇರಿದು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ವಸಂತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸಿದ್ದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುಚಿತ್ರಾ, ಕಮಲಾಕರ ಭಟ್ ಸೇರಿದಂತೆ ಇತರರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಮುಂದುವರಿದಿದೆ.
ಈ ಘಟನೆ ಗ್ರಾಮದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.








