ರಾಷ್ಟ್ರೋತ್ಥಾನ ಶಿಶುಮಂದಿರದಲ್ಲಿ 9 ಮಕ್ಕಳಿಗೆ ವಿದ್ಯಾರಂಭ ಸಂಸ್ಕಾರ ಪೂಜೆ
ಸರಸ್ವತಿ ಪೂಜೆ ಎಂದೂ ಕರೆಯಲ್ಪಡುವ ವಸಂತ ಪಂಚಮಿ, ಹಿಂದೂ ಪಂಚಾಂಗದ ಪ್ರಕಾರ ಆಧ್ಯಾತ್ಮಿಕವಾಗಿ ಮಹತ್ವದ ಹಬ್ಬಗಳಲ್ಲಿ ಒಂದಾಗಿದ್ದು, ವಸಂತಕಾಲದ ಆರಂಭವನ್ನು ಸೂಚಿಸುತ್ತದೆ. ಈ ದಿನವನ್ನು ಸರಸ್ವತಿ ಜಯಂತಿ ಎಂದೂ ಕರೆಯಲಾಗುತ್ತದೆ.

ಹಿಂದೂ ಧರ್ಮದಲ್ಲಿ ಮಗುವಿಗೆ ವಿದ್ಯಾರಂಭ ಸಂಸ್ಕಾರವನ್ನು ಮಾಡುವುದರ ಹಿಂದೆ ಮಹತ್ವದ ಕಾರಣವಿದ್ದು, ಈ ಸಂಸ್ಕಾರದ ಮೂಲಕ ಮಗುವಿನ ಆಸಕ್ತಿಗಳನ್ನು ಜ್ಞಾನ ಮತ್ತು ಶಿಕ್ಷಣದ ಕಡೆಗೆ ಪ್ರೇರೇಪಿಸಲಾಗುತ್ತದೆ. ಜೊತೆಗೆ ಸಾಮಾಜಿಕ ಹಾಗೂ ನೈತಿಕ ಗುಣಗಳನ್ನು ಬೆಳೆಸುವಂತೆ ದೇವರಲ್ಲಿ ಪ್ರಾರ್ಥಿಸಲಾಗುತ್ತದೆ.
ಮಕ್ಕಳಲ್ಲಿ ಬಾಲ್ಯದಿಂದಲೇ ಸಂಸ್ಕಾರ ಬೆಳೆಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರೋತ್ಥಾನ ಶಿಶುಮಂದಿರವು ವಿದ್ಯಾರಂಭ ಸಂಸ್ಕಾರ ಪೂಜೆಯನ್ನು ಆಯೋಜಿಸಿತು. ಪಟ್ಟಣದ ಶಿಶುಮಂದಿರದಲ್ಲಿ ಶಿಶುಗಳು ತಮ್ಮ ಪೋಷಕರೊಂದಿಗೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ವಿಶೇಷವಾಗಿ 4 ವರ್ಷ 4 ತಿಂಗಳು ಪೂರ್ಣಗೊಂಡ 9 ಮಕ್ಕಳು ಹಾಗೂ ಅವರ ಪೋಷಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪೂಜೆಯ ಪೌರೋಹಿತ್ಯವನ್ನು ವೇದಮೂರ್ತಿ ಚಂದ್ರಶೇಖರ ಭಟ್ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಶಿಶುಮಂದಿರದ ಅಧ್ಯಕ್ಷ ಬ್ಯಾಂಕ್ ರತ್ನಾಕರ್, ಸದಸ್ಯರಾದ ದೇವದಾಸ್ ಆಚಾರ್, ರಾಮಚಂದ್ರ, ಬ್ಯಾಂಕ್ ಶಿವಾನಂದ, ಶಿಶುಮಂದಿರದ ಮಾತಾಜಿಗಳಾದ ಗಾಯಿತ್ರಿ ಮಾತಾಜಿ, ಸುಮಾ ಮಾತಾಜಿ ಹಾಗೂ ಪೋಷಕರು ಉಪಸ್ಥಿತರಿದ್ದರು.








