ವಿಬಿ–ಜಿ–ರಾಮ್ ಯೋಜನೆಯಲ್ಲಿ ಉದ್ಯೋಗದ ದಿನಗಳನ್ನು 125ಕ್ಕೆ ಹೆಚ್ಚಿಸಲಾಗಿದೆ; ಗ್ರಾಮ ಪಂಚಾಯಿತಿಗಳ ಅಧಿಕಾರ ಕಡಿತಗೊಳಿಸುವ ಪ್ರಶ್ನೆಯೇ ಇಲ್ಲ

Photo of author

By vishwachetana807@gmail.com

ಶಿವಮೊಗ್ಗ |ವಿಬಿ–ಜಿ–ರಾಮ್ (ಗ್ರಾಮೀಣ ಉದ್ಯೋಗ ಖಾತರಿ) ಯೋಜನೆಯಡಿ ಉದ್ಯೋಗದ ದಿನಗಳನ್ನು 100ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಸ್ಪಷ್ಟಪಡಿಸಿದ್ದಾರೆ. ಗ್ರಾಮ ಪಂಚಾಯಿತಿಗಳ ಅಧಿಕಾರವನ್ನು ಕಡಿತಗೊಳಿಸಲಾಗಿದೆ ಎಂಬ ಆರೋಪಗಳು ನಿರಾಧಾರ ಎಂದು ಅವರು ತಿಳಿಸಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದರು, “ಗ್ರಾಮ ಪಂಚಾಯಿತಿಗಳೇ ಉದ್ಯೋಗ ಖಾತರಿ ಯೋಜನೆಯ ಮುಖ್ಯ ಆಧಾರ. ಅವುಗಳ ಅಧಿಕಾರವನ್ನು ಯಾವುದೇ ಕಾರಣಕ್ಕೂ ಮೊಟಕುಗೊಳಿಸುವುದಿಲ್ಲ. ಪಂಚಾಯಿತಿಗಳ ಮೂಲಕವೇ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ” ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಪಕ್ಷದ ಆರೋಪಗಳಿಗೆ ತಿರುಗೇಟು ನೀಡಿದ ಅವರು, “ಜವಾಹರಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಸೇರಿದಂತೆ 450ಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳಿಗೆ ಹೆಸರು ಇಡುವಾಗ ಮಹಾತ್ಮ ಗಾಂಧೀಜಿ ನೆನಪಾಗಿರಲಿಲ್ಲ. ಈಗ ನರೇಗಾ ವಿಚಾರದಲ್ಲಿ ಮಾತ್ರ ಏಕಾಏಕಿ ಗಾಂಧೀಜಿ ಹೆಸರು ನೆನಪಾಗಿರುವುದು ರಾಜಕೀಯ ದ್ವಂದ್ವ ನೀತಿಯ ಪ್ರತಿಬಿಂಬ” ಎಂದು ಟೀಕಿಸಿದರು.

ವಿಬಿ–ಜಿ–ರಾಮ್ ಯೋಜನೆಯಡಿ ಉದ್ಯೋಗದ ದಿನಗಳನ್ನು ಹೆಚ್ಚಿಸಿರುವುದರಿಂದ ಗ್ರಾಮೀಣ ಜನರಿಗೆ ಹೆಚ್ಚುವರಿ ಆದಾಯ ಸಿಗಲಿದ್ದು, ವಲಸೆ ಸಮಸ್ಯೆ ಕಡಿಮೆಯಾಗಲಿದೆ. ಇದರಿಂದ ಗ್ರಾಮೀಣ ಆರ್ಥಿಕತೆಗೆ ಮತ್ತಷ್ಟು ಬಲ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ. ಜಗದೀಶ್, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಹಾಗೂ ಪಕ್ಷದ ಪ್ರಮುಖರಾದ ಮಾಲತೇಶ್, ಹರಿಕೃಷ್ಣ, ಶಿವರಾಜ್, ರಾಜೇಶ್ ಕಾಮತ್, ಎ. ಮಂಜುನಾಥ್, ಮಲ್ಲಿಕಾರ್ಜುನ ಹಕ್ರೆ, ಎಸ್. ಚಂದ್ರಶೇಖರ್ ಉಪಸ್ಥಿತರಿದ್ದರು.

“ಗ್ರಾಮ ಪಂಚಾಯಿತಿಗಳ ಅಧಿಕಾರವನ್ನು ಯಾವುದೇ ಕಾರಣಕ್ಕೂ ಮೊಟಕುಗೊಳಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ.”

ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ

Leave a Comment