ವಿಕಸಿತ ಭಾರತ ಬಿಜೆಪಿಯ ಕನಸು: ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ“ರಾಮ್ ಎಂದರೆ ಕಾಂಗ್ರೆಸ್ ಸಹಿಸಿಕೊಳ್ಳಲ್ಲ” – ಹರಿಕೃಷ್ಣ ಆಕ್ರೋಶವಿಬಿ-ಜಿ ರಾಮ್ ಜಿ ಯೋಜನೆ ಕುರಿತು ಮಾಹಿತಿ ಕಾರ್ಯಾಗಾರ

Photo of author

By vishwachetana807@gmail.com

ರಿಪ್ಪನ್ ಪೇಟೆ:| ಫೆಬ್ರವರಿ 23:  ಕೇಂದ್ರ ಸರ್ಕಾರ ಗ್ರಾಮೀಣ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಮನ್ರೇಗಾ ಬದಲಾಗಿ “ವಿಬಿ-ಜಿ ರಾಮ್ ಜಿ (VB-G RAM G)” ಯೋಜನೆಯನ್ನು ಜಾರಿಗೆ ತಂದಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ತಿಳಿಸಿದ್ದಾರೆ. ಈ ಯೋಜನೆ ಗ್ರಾಮೀಣ ಜನತೆಗೆ ಉದ್ಯೋಗ ಭರವಸೆ ನೀಡುವ ಜೊತೆಗೆ ಶಾಶ್ವತ ಜೀವನೋಪಾಯ ನಿರ್ಮಾಣಕ್ಕೂ ಒತ್ತು ನೀಡುತ್ತದೆ. “ವಿಕಸಿತ ಭಾರತ”ದ ದಿಸೆಯಲ್ಲಿ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ರಿಪ್ಪನ್ ಪೇಟೆಯಲ್ಲಿ ಬಿಜೆಪಿ ಹೊಸನಗರ ಮಂಡಲದ ವತಿಯಿಂದ ನಡೆದ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯೋಜನೆ ಕುರಿತು ಕಾಂಗ್ರೆಸ್ ಪಕ್ಷದಿಂದ ನಡೆಯುತ್ತಿರುವ ಅಪಪ್ರಚಾರಕ್ಕೆ ಪ್ರತಿಯಾಗಿ ಸತ್ಯಾಂಶವನ್ನು ಜನರಿಗೆ ತಲುಪಿಸುವುದು ಪ್ರತಿಯೊಬ್ಬ ಕಾರ್ಯಕರ್ತನ ಕರ್ತವ್ಯ ಎಂದು ಹೇಳಿದರು.

ಈ ಭಾಗದಲ್ಲಿ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಕಾಮಗಾರಿಗಳನ್ನು ಸ್ಮರಿಸಿದ ಅವರು, “ನಾವು ರೂಪಿಸಿ ಹಣ ಬಿಡುಗಡೆಗೊಳಿಸಿದ ಯೋಜನೆಗಳನ್ನು ಇಂದಿನ ಅಧಿಕಾರಿಗಳು ತಮ್ಮದಾಗಿ ಹೇಳಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದರು. ರಿಪ್ಪನ್ ಪೇಟೆಯ ಸೌಂದರ್ಯ ಅಭಿವೃದ್ಧಿಗೆ ಕೈಗೊಂಡ ರಸ್ತೆ ಕಾಮಗಾರಿಗಳನ್ನು ಉಲ್ಲೇಖಿಸಿ ತಮ್ಮ ಆಡಳಿತದ ಕೊಡುಗೆಯನ್ನು ವಿವರಿಸಿದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, “ವಿಬಿ-ಜಿ ರಾಮ್ ಜಿ ಯೋಜನೆಯಿಂದ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭರವಸೆ ಹೆಚ್ಚಾಗಿದೆ. ಹಿಂದಿನ 100 ದಿನಗಳ ಉದ್ಯೋಗ ಭರವಸೆಯನ್ನು 125 ದಿನಗಳಿಗೆ ವಿಸ್ತರಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ವೆಚ್ಚ ಹಂಚಿಕೊಳ್ಳಬೇಕಿರುವುದರಿಂದ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ” ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಿಕೃಷ್ಣ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, “ರಾಮ್ ಎಂಬ ಪದವೇ ಕಾಂಗ್ರೆಸ್‌ಗೆ ಅಸಹ್ಯ. ಆದ್ದರಿಂದಲೇ ವಿಬಿ-ಜಿ ರಾಮ್ ಜಿ ಯೋಜನೆಯನ್ನು ಸಹ ವಿರೋಧಿಸುತ್ತಿದ್ದಾರೆ” ಎಂದು ಹೇಳಿದರು. ವಿಕೇಂದ್ರೀಕರಣ ವ್ಯವಸ್ಥೆಯನ್ನು ಕಾಂಗ್ರೆಸ್ ಒಪ್ಪುವುದಿಲ್ಲ ಎಂದು ಆರೋಪಿಸಿ, “ಈಗ ಗ್ರಾಮ ಪಂಚಾಯಿತಿಗಳಿಗೆ ನೇರವಾಗಿ ಅನುದಾನ ಸಿಗುತ್ತಿದೆ; ಹಿಂದೆ ಪ್ರಭಾವ ಬಳಸಿ ಹಣ ಬಿಡುಗಡೆ ಮಾಡಿಸಿಕೊಳ್ಳಬೇಕಾಗುತ್ತಿತ್ತು” ಎಂದರು.

ಕೇಂದ್ರ ಸರ್ಕಾರ ಉತ್ತಮ ಯೋಜನೆಗಳನ್ನು ಜಾರಿಗೆ ತಂದರೂ ಕಾಂಗ್ರೆಸ್ ಅವುಗಳನ್ನು ವಿರೋಧಿಸುವುದೇ ತನ್ನ ಸ್ವಭಾವವಾಗಿದೆ ಎಂದು ಆರೋಪಿಸಿ, “ದೇಶದ ಅಭಿವೃದ್ಧಿಯನ್ನು ಸಹಿಸಲು ಸಾಧ್ಯವಿಲ್ಲದ ಮನೋಭಾವ ಕಾಂಗ್ರೆಸ್ ಹೊಂದಿದೆ” ಎಂದು ಕಿಡಿಕಾರಿದರು.

ಕೆರೆಹಳ್ಳಿ ಹೋಬಳಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸುಂದರೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಸಿದ್ದಲಿಂಗಪ್ಪ, ಮಂಡಲ ಪ್ರಭಾರಿ ಮಹೇಶ್, ಮಂಡಲ ಅಧ್ಯಕ್ಷ ಎನ್. ಸತೀಶ್, ಎಂ.ಎನ್. ಸುಧಾಕರ, ಎ.ಟಿ. ನಾಗರತ್ನಮ್ಮ, ಬೆಳ್ಳೂರು ತಿಮ್ಮಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಆರ್.ಟಿ. ಗೋಪಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮುದಾ ಮತ್ತು ತಂಡ ಪ್ರಾರ್ಥನೆ ಸಲ್ಲಿಸಿದರು. ಜಿ.ಡಿ. ಮಲ್ಲಿಕಾರ್ಜುನ ಕಾರ್ಯಕ್ರಮ ನಿರೂಪಿಸಿದರು. ಅರುಣ್ ಕಟ್ಟೆ ವಂದಿಸಿದರು.

“ಕಾಂಗ್ರೆಸ್ ಪಕ್ಷವು ದೇಶದ ಅಭಿವೃದ್ಧಿಗೆ ಅಡ್ಡಿಯಾಗುವ ರಾಜಕೀಯ ನಡೆಸುತ್ತಿದೆ. ಭಾರತ ಮುನ್ನಡೆಯಲು ಕೈಗೊಳ್ಳುವ ಪ್ರತಿಯೊಂದು ಯೋಜನೆಯನ್ನೂ ವಿರೋಧಿಸುವ ಮನೋಭಾವವೇ ಅವರ ಮೂಲ ಸ್ವಭಾವವಾಗಿದೆ. ರಾಷ್ಟ್ರ ಹಿತಕ್ಕಿಂತ ರಾಜಕೀಯ ಲಾಭವೇ ಅವರಿಗೆ ಮುಖ್ಯ.”
— ಹರಿಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬಿಜೆಪಿ

ಬರಹ: ತಂಡ, vishwachetana.com

Leave a Comment