ಬಟ್ಟೆಮಲ್ಲಪ್ಪ: ಇಲ್ಲಿನ ಶ್ರೀ ವ್ಯಾಸಮಹರ್ಷಿ ಗುರುಕುಲದ ಷೋಡಶೀಯ ಪ್ರದರ್ಶಿನಿ ಸಂಭ್ರಮೋತ್ಸವದ ಅಂಗವಾಗಿ, ನಾಡಗೀತೆಗೆ ನೂರು ಹಾಗೂ ವಂದೇಮಾತರಂಗೆ ನೂರೈವತ್ತು ವರ್ಷ ತುಂಬಿದ ವಿಶೇಷ ಸಂದರ್ಭದಲ್ಲಿ ಫೆಬ್ರವರಿ 16 ಮತ್ತು 17ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಎಸ್. ಬ್ಯಾಣ ತಿಳಿಸಿದ್ದಾರೆ.

ಫೆಬ್ರವರಿ 16: ಗೀತಗಾಯನ ಸ್ಪರ್ಧೆ ಮತ್ತು ಸಾಂಸ್ಕೃತಿಕ ಸಂಜೆ ಸೋಮವಾರ (ಫೆ. 16) ಬೆಳಿಗ್ಗೆ 10 ಗಂಟೆಗೆ ಗುರುಕುಲದ ಆವರಣದಲ್ಲಿ ತಾಲ್ಲೂಕು ಮಟ್ಟದ ನಾಡಗೀತೆ ಮತ್ತು ವಂದೇಮಾತರಂ ಗೀತಗಾಯನ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳಿಗೆ ಪ್ರತ್ಯೇಕವಾಗಿ ನಡೆಯಲಿದ್ದು, ಪ್ರತಿ ತಂಡದಲ್ಲಿ 6ರಿಂದ 8 ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ವಿಜೇತ ಒಟ್ಟು 12 ತಂಡಗಳಿಗೆ ನಗದು ಬಹುಮಾನ, ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
ಅದೇ ದಿನ ಸಂಜೆ 4ಕ್ಕೆ ನಗರ ಸಂಕೀರ್ತನೆ ನಡೆಯಲಿದ್ದು, ನಂತರ ಸಭಾ ಕಾರ್ಯಕ್ರಮದಲ್ಲಿ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಳಿಕ ಗುರುಕುಲದ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ.


ಫೆಬ್ರವರಿ 17: ಪ್ರಶಸ್ತಿ ಪ್ರದಾನ ಮತ್ತು ಯಕ್ಷಯೋತ್ಸವ
ಫೆ. 17ರಂದು ಸಂಜೆ 4 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪ್ರತಿಷ್ಠಿತ ‘ಶ್ರೀ ವೇದ ವ್ಯಾಸ ಗುರುಪುರಸ್ಕಾರ’ ಪ್ರದಾನ ಮಾಡಲಾಗುವುದು. ನಂತರ ಸಂಜೆ 6ರಿಂದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ವಾರಂಬಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ‘ಮೇಧಿನಿ ನಿರ್ಮಾಣ’, ಗುರುಕುಲದ ಮಕ್ಕಳಿಂದ ‘ಲವ ಕುಶ’ ಹಾಗೂ ಹೆಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ‘ವೀರ ಅಭಿಮನ್ಯು’ ಯಕ್ಷ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬರಹ: ತಂಡ, vishwachetana.com







