
ಹೊಸನಗರ: ಶಿವಮೊಗ್ಗದ ಡಿ.ವಿ.ಎಸ್. ಕಾಲೇಜಿನಲ್ಲಿ ಇತ್ತೀಚೆಗಷ್ಟೇ ನಡೆದ 38ನೇ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ. ಈ ಕ್ರೀಡಾಕೂಟದಲ್ಲಿ ಅತ್ಯುತ್ತಮ ಕ್ರೀಡಾ ಪ್ರದರ್ಶನ ನೀಡಿದ ಕಾಲೇಜಿನ ಮಹಿಳಾ ತಂಡವು ಸಮಗ್ರ ವಿಭಾಗದಲ್ಲಿ ‘ತೃತೀಯ ಚಾಂಪಿಯನ್’ ಆಗಿ ಹೊರಹೊಮ್ಮುವ ಮೂಲಕ ಕಾಲೇಜಿಗೆ ಅಭೂತಪೂರ್ವ ಕೀರ್ತಿ ತಂದಿದೆ.

ವೈಯಕ್ತಿಕ ಸಾಧನೆಯಲ್ಲಿ ಮಹಿಳೆಯರ ವಿಭಾಗದ ಪುಷ್ಪ ಎಂ. ಅವರು 10 ಕಿ.ಮೀ ಮತ್ತು 5 ಕಿ.ಮೀ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದರೆ, ಸಿಂಧು 20 ಕಿ.ಮೀ ರೇಸ್ ವಾಕ್ನಲ್ಲಿ ಹಾಗೂ ಸ್ಪೂರ್ತಿ 400 ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಮಿಂಚಿದ್ದಾರೆ. ಹ್ಯಾಮರ್ ಥ್ರೋನಲ್ಲಿ ಚಂದನ ದ್ವಿತೀಯ ಸ್ಥಾನ ಹಾಗೂ ಸುಶ್ಮಿತಾ ತೃತೀಯ ಸ್ಥಾನ ಗಳಿಸಿದ್ದಾರೆ. ಪ್ರೇಮ ಅವರು 1500 ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದರೆ, 4*100 ಮೀ ರಿಲೇನಲ್ಲಿ ಪುಷ್ಪ, ಸ್ಫೂರ್ತಿ, ಸಿಂಧು ಮತ್ತು ಪ್ರಿಯಾ ತಂಡವು ತೃತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಪುರುಷರ ವಿಭಾಗದಲ್ಲೂ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದು, ಆದಿತ್ಯ ಎಂ. 20 ಕಿ.ಮೀ ರೇಸ್ ವಾಕ್ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ವಿನಯ್ ಬಿ.ಸಿ. 10 ಕಿ.ಮೀ ಓಟದಲ್ಲಿ ಹಾಗೂ ವಿನಾಯಕ 5 ಕಿ.ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪ್ರಮೋದ್ ಯು. 5 ಕಿ.ಮೀ ಓಟದಲ್ಲಿ ತೃತೀಯ ಸ್ಥಾನ ಮತ್ತು ಆಕಾಶ್ ಡಿಕಾಥ್ಲಾನ್ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಕಾಲೇಜಿನ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ. ವಿದ್ಯಾರ್ಥಿಗಳ ಈ ಕ್ರೀಡಾ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಬೋಧಕ ವರ್ಗ ಹಾಗೂ ಕ್ರೀಡಾ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಬರಹ: Chetandas Hosamane









