ಶಿವಮೊಗ್ಗದಲ್ಲಿ ನಾರಿ ಶಕ್ತಿಯ ಗುಡುಗು: ಮಹಿಳಾ ವಿರೋಧಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾದಿಂದ ಬೃಹತ್ ಆಕ್ರೋಶ

Photo of author

By vishwachetana807@gmail.com

ಶಿವಮೊಗ್ಗ: ಮಹಿಳೆಯರು ರಾಜಕೀಯವಾಗಿ ಸಬಲರಾಗಬೇಕು ಮತ್ತು ಶಾಸನಸಭೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಪಡೆಯಬೇಕೆಂಬ ದಶಕಗಳ ಕಾಲದ ಕನಸಿಗೆ ಕಾಂಗ್ರೆಸ್ ಪಕ್ಷವು ಅಡ್ಡಗಾಲಾಗುತ್ತಿದೆ ಎಂದು ಆರೋಪಿಸಿ ಇಂದು ಶಿವಮೊಗ್ಗ ನಗರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಅತ್ಯಂತ ಬೃಹತ್ ಮಟ್ಟದ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಮತ್ತು ಭ್ರಷ್ಟ ನೀತಿಗಳ ವಿರುದ್ಧ ನಗರದ ಪ್ರಮುಖ ರಸ್ತೆಗಳಲ್ಲಿ ಕೇಸರಿ ಪಡೆ ರಣಕಹಳೆ ಮೊಳಗಿಸಿತು.

​ಈ ಹೋರಾಟಕ್ಕೆ ದೈವಿಕ ಸ್ಪರ್ಶ ನೀಡುವ ಸಲುವಾಗಿ, ಪ್ರತಿಭಟನೆಯ ಆರಂಭಕ್ಕೂ ಮುನ್ನ ನಗರದ ಐತಿಹಾಸಿಕ ರಾಮಣ್ಣ ಶ್ರೇಷ್ಠಿ ಗಣಪತಿ ದೇವಸ್ಥಾನದಲ್ಲಿ ಸಮಸ್ತ ಮಹಿಳಾ ಪದಾಧಿಕಾರಿಗಳು ಮತ್ತು ಹಿರಿಯ ಮುಖಂಡರು ವಿಶೇಷ ಪೂಜೆ ಸಲ್ಲಿಸಿದರು. ಆನಂತರ ಅಲ್ಲಿಂದ ಹೊರಟ ಮೆರವಣಿಗೆಯು ನಗರದ ಪ್ರಮುಖ ವೃತ್ತಗಳ ಮೂಲಕ ಸಾಗುತ್ತಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳ ಮೂಲಕ ಕಿಡಿಕಾರಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಾಯಕರು, “ದೇಶದ ಹಿತದೃಷ್ಟಿಯಿಂದ ಹಾಗೂ ಮಹಿಳೆಯರ ಸಾಮಾಜಿಕ ಮತ್ತು ರಾಜಕೀಯ ಸಬಲೀಕರಣಕ್ಕಾಗಿ ಸ್ವತಃ ದೇಶದ ಹೆಮ್ಮೆಯ ಪ್ರಧಾನಮಂತ್ರಿಯವರು ಮಹಿಳಾ ಮೀಸಲಾತಿ ಮಸೂದೆಯನ್ನು ಪಕ್ಷಾತೀತವಾಗಿ ಬೆಂಬಲಿಸುವಂತೆ ಎಲ್ಲಾ ಪಕ್ಷಗಳಲ್ಲಿ ವಿನಂತಿಸಿದ್ದರು. ಆದರೆ ಮಹಿಳೆಯರ ಪ್ರಗತಿಯನ್ನು ಸಹಿಸದ ಕಾಂಗ್ರೆಸ್, ರಾಜಕೀಯ ಜಿದ್ದಿಗೆ ಬಿದ್ದು ಈ ಐತಿಹಾಸಿಕ ಮಸೂದೆಗೆ ಸೋಲುಣಿಸುವ ಕೆಲಸ ಮಾಡಿದೆ. ಇದು ಕೇವಲ ಮಸೂದೆಯ ಸೋಲಲ್ಲ, ಬದಲಾಗಿ ಇಡೀ ದೇಶದ ಜನತೆಗೆ ಮತ್ತು ನಾರಿ ಶಕ್ತಿಗೆ ಮಾಡಿದ ಮಹಾದ್ರೋಹವಾಗಿದೆ. ಇಂತಹ ವಿಧ್ವಂಸಕ ಮನಸ್ಥಿತಿಯ ಕಾಂಗ್ರೆಸ್ ಪಕ್ಷವನ್ನು ದೇಶದ ಜನತೆ ಎಂದಿಗೂ ಕ್ಷಮಿಸಲಾರರು” ಎಂದು ಗುಡುಗಿದರು. ಅಲ್ಲದೆ, ಮಹಿಳೆಯರ ಹಕ್ಕನ್ನು ಕಸಿದುಕೊಳ್ಳುತ್ತಿರುವ ಈ ಪಕ್ಷಕ್ಕೆ ಅದೇ ನಾರಿ ಶಕ್ತಿಯು ರಾಜಕೀಯವಾಗಿ ಅಂತಿಮ ಮೊಳೆ ಹೊಡೆಯುವ ಕಾಲ ಹತ್ತಿರದಲ್ಲಿದೆ ಎಂದು ಎಚ್ಚರಿಸಿದರು.

ಈ ಶಕ್ತಿ ಪ್ರದರ್ಶನದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ, ನಗರದ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕರಾದ ಡಿ.ಎಸ್. ಅರುಣ್ ಮತ್ತು ಡಾ. ಧನಂಜಯ್ ಸರ್ಜಿ ಅವರು ಪಾಲ್ಗೊಂಡು ಹೋರಾಟಕ್ಕೆ ಸಾಥ್ ನೀಡಿದರು. ಉಳಿದಂತೆ ಬಿಜೆಪಿ ಜಿಲ್ಲಾಧ್ಯಕ್ಷರಾದ ಜಗದೀಶ್, ನಗರಾಧ್ಯಕ್ಷರಾದ ಮೋಹನ್ ರೆಡ್ಡಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಮಧುರ ಶಿವಾನಂದ್, ನಗರ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ರಶ್ಮಿ ಶ್ರೀನಿವಾಸ್, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಪ್ರಭಾರಿಗಳಾದ ಆರ್.ಕೆ. ಸಿದ್ದರಾಮಣ್ಣ ಅವರು ಉಪಸ್ಥಿತರಿದ್ದರು. ಇವರೊಂದಿಗೆ ಜಿಲ್ಲಾ ಮತ್ತು ನಗರದ ಮಹಿಳಾ ಮೋರ್ಚಾದ ಸಾಲು ಸಾಲು ಪದಾಧಿಕಾರಿಗಳು, ಪ್ರಮುಖರು ಹಾಗೂ ನೂರಾರು ಸಂಖ್ಯೆಯ ಕಾರ್ಯಕರ್ತೆಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕುವ ಮೂಲಕ ಕಾಂಗ್ರೆಸ್ ಮುಕ್ತ ಭಾರತದ ಸಂಕಲ್ಪವನ್ನು ಪುನರುಚ್ಚರಿಸಿದರು.

ಬರಹ: Chetandas Hosamane

Leave a Comment