
ರಿಪ್ಪಿನಪೇಟೆಯಲ್ಲಿ ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟ ಮತ್ತು ರಿಪ್ಪಿನಪೇಟೆ ಪೊಲೀಸ್ ಠಾಣೆಯ ಸಂಯುಕ್ತ ಸಹಕಾರದಲ್ಲಿ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.
ಈ ಶಿಬಿರದಲ್ಲಿ ಅರುವತ್ತೆರಡಕ್ಕೂ ಹೆಚ್ಚು ಜನರು ರಕ್ತದಾನ ಮಾಡಿ ಮಾನವೀಯ ಸೇವೆ ಸಲ್ಲಿಸಿದರು.
ರಿಪ್ಪಿನಪೇಟೆ ಸಬ್ ಇನ್ಸ್ಪೆಕ್ಟರ್ ರಾಜು ರೆಡ್ಡಿ ಅವರು ಸೇರಿದಂತೆ ರಾಮಚಂದ್ರ, ಸುರೇಶ್ ಹಾಗೂ ಇತರ ಪೊಲೀಸ್ ಸಿಬ್ಬಂದಿಗಳು ಸ್ವತಃ ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾದರು.


ಈ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದ ಗ್ರಾಮಾಂತರ ಅಧ್ಯಕ್ಷರಾದ ಮೊಹಮ್ಮದ್ ಹುಸೇನ್ ಹಾಗೂ ಉಪಾಧ್ಯಕ್ಷರಾದ ಶಂಕರ್ ಆಚಾರ್ಯ ಅವರ ಆಯೋಜನೆಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಕಾರ್ಯಕ್ರಮದ ವಿಶೇಷತೆಯಾಗಿ ಕಾರ್ಮಿಕರ ಮಕ್ಕಳಿಗೆ ಗೌರವ ಸಲ್ಲಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳನ್ನು ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ಸಂಜಯ್ ಕುಮಾರ್, ಕಾರ್ಯಾಧ್ಯಕ್ಷರಾದ ಸುಂದರ್ ಬಾಬು, ಗ್ರಾಮಾಂತರ ಅಧ್ಯಕ್ಷರಾದ ಮೊಹಮ್ಮದ್ ಹುಸೇನ್, ಪ್ರೊಬೇಷನರಿ ಸಬ್ ಇನ್ಸ್ಪೆಕ್ಟರ್ ಶ್ರೀಕಾಂತ್ ಹಾಗೂ ಎಸ್‌ಐ ಲಕ್ಷ್ಮೀ ಅವರು ಶಾಲು ಹೊದಿಸಿ, ಹಾರ ಹಾಕಿ ಪಾರಿತೋಷಕ ನೀಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ರಿಪ್ಪಿನಪೇಟೆ ವ್ಯಾಪ್ತಿಯಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ರಾಹಿಲ್ (ರಿಪ್ಪಿನಪೇಟೆ) ಹಾಗೂ ಕೆರೆಹಳ್ಳಿ ಅಂಜನ ಅವರನ್ನು ವಿಶೇಷವಾಗಿ ಸನ್ಮಾನಿಸಿ, ಯುವಕರಿಗೆ ಮಾದರಿಯಾಗುವಂತೆ ಗೌರವಿಸಲಾಯಿತು.
ರಕ್ತದಾನ ಶಿಬಿರ ಯಶಸ್ವಿಯಾದ ಹಿನ್ನೆಲೆ ಆಶಾ ಜ್ಯೋತಿ ಸ್ವಯಂಪ್ರೇರಿತ ರಕ್ತ ಕೇಂದ್ರದ ವತಿಯಿಂದ ಕಾರ್ಯಕ್ರಮ ಆಯೋಜಕರಾದ ಮೊಹಮ್ಮದ್ ಹುಸೇನ್, ಶಂಕರ್ಚಾರಿ ಹಾಗೂ ಕಾರ್ಯದರ್ಶಿ ರಾಘವೇಂದ್ರ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಬರಹ: Chetandas Hosamane









