ಸರಳತೆಯ ಸಾಕಾರಮೂರ್ತಿ, ಜನರ ಪ್ರೀತಿಯ ‘ಶಂಕರಣ್ಣ’ ವಿಧಿಯ ಆಟಕ್ಕೆ ಬಲಿ

ಬಡತನದ ಬೇಗೆಯಲ್ಲೂ ನಗು ಹಂಚಿದ್ದ ಕಚ್ಚಿಗೆಬೈಲಿನ ‘ಸೇವಕ’ ಇನ್ನಿಲ್ಲ: ಅಪಘಾತಕ್ಕೆ ಬಲಿಯಾದ ಶಂಕರ ಶೆಟ್ಟಿ

ಹೊಸನಗರ ತಾಲ್ಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರು ಹಾಗೂ ಕಚ್ಚಿಗೆಬೈಲು ಕ್ಷೇತ್ರದ ನಿಕಟಪೂರ್ವ ಸದಸ್ಯರಾಗಿದ್ದ ಶಂಕರ ಶೆಟ್ಟಿ (65) ಅವರು ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಬುಧವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅವರ ಮೆದುಳಿಗೆ ಗಂಭೀರ ಗಾಯಗಳಾಗಿದ್ದವು. ಮೊದಲು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

1961ರಲ್ಲಿ ಕಡು ಬಡತನದ ಕುಟುಂಬದಲ್ಲಿ ಜನಿಸಿದ ಶಂಕರ ಶೆಟ್ಟಿ ಅವರು ಕಚ್ಚಿಗೆಬೈಲಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಆರ್ಥಿಕ ಮುಗ್ಗಟ್ಟಿನಿಂದಾಗಿ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಆಂಧ್ರಪ್ರದೇಶದ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ಮುಂದೆ ಹೊಸನಗರ ಮತ್ತು ಮಾಸ್ತಿಕಟ್ಟೆಯ ಹೋಟೆಲ್‌ಗಳಲ್ಲಿ ಕೆಲಸ ಮಾಡಿ ಅನುಭವ ಪಡೆದ ಅವರು, ನಂತರ ಸ್ವಗ್ರಾಮ ಕಚ್ಚಿಗೆಬೈಲಿನಲ್ಲಿ ಸಣ್ಣ ಹೋಟೆಲ್ ಆರಂಭಿಸುವ ಮೂಲಕ ಸ್ವಂತ ಉದ್ಯಮಿಯಾಗಿದ್ದರು. ಉದ್ಯಮದ ಜೊತೆಗೆ ಪತ್ರಿಕಾ ವಿತರಕರಾಗಿಯೂ ಅವರು ಗುರುತಿಸಿಕೊಂಡಿದ್ದರು.

ಅತ್ಯಂತ ಜನಾನುರಾಗಿಯಾಗಿದ್ದ ಇವರು, ಪ್ರತಿದಿನ ತಮ್ಮ ಹೋಟೆಲ್ ಪಕ್ಕದ ಬಸ್ ನಿಲ್ದಾಣವನ್ನು ಸ್ವತಃ ಸ್ವಚ್ಛಗೊಳಿಸಿ ಅಲಂಕರಿಸುವುದನ್ನು ಕಾಯಕವಾಗಿಸಿಕೊಂಡಿದ್ದರು. ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷದ ಬೆಂಬಲವಿಲ್ಲದೆ ಸ್ವತಂತ್ರವಾಗಿ ಸ್ಪರ್ಧಿಸಿ ಭರ್ಜರಿ ಜಯ ದಾಖಲಿಸಿದ್ದರು. ಮಾರುತಿಪುರ ಪಂಚಾಯಿತಿಯ ಉಪಾಧ್ಯಕ್ಷರಾಗಿ ಕುಡಿಯುವ ನೀರಿನ ಯೋಜನೆಗಳಿಗೆ ವಿಶೇಷ ಆದ್ಯತೆ ನೀಡಿದ್ದರು. ತಾವು ಓದಿದ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿ ಶಾಲಾ ಅಭಿವೃದ್ಧಿಗೆ ಶ್ರಮಿಸಿದ್ದ ಇವರು, ಬಟ್ಟೆಮಲ್ಲಪ್ಪದ ಭಂಟರ ಯಾನೆ ನಾಡವರ ಸಂಘದಲ್ಲಿಯೂ ಸಕ್ರಿಯರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಬರಹ: Chetandas Hosamane

Leave a Comment