​ಹೊಸನಗರ: ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಕಳ್ಳರ ಕೈಚಳಕ; ಕಾಣಿಕೆ ಹುಂಡಿ ಹಣ ಲೂಟಿ

ಹೊಸನಗರ: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಬುಧವಾರ ತಡರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ಕಾಣಿಕೆ ಹುಂಡಿಯ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಏಪ್ರಿಲ್ 29ರ ರಾತ್ರಿ ಪೂಜೆ ಮುಗಿಸಿ ಅರ್ಚಕರು ದೇವಸ್ಥಾನಕ್ಕೆ ಬೀಗ ಹಾಕಿ ಮನೆಗೆ ತೆರಳಿದ್ದರು. ಮರುದಿನ ಬೆಳಿಗ್ಗೆ ದೇವಸ್ಥಾನಕ್ಕೆ ಆಗಮಿಸಿದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ಕಳ್ಳರು ಅತ್ಯಂತ ಚಾಲಾಕಿತನದಿಂದ ದೇವಸ್ಥಾನದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ, ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸ ಮಾಡಿ ಈ ಕೃತ್ಯ ಎಸಗಿದ್ದಾರೆ. ದೇವಸ್ಥಾನದ ಮೂರು ಕಾಣಿಕೆ ಹುಂಡಿಗಳ ಬೀಗ ಮುರಿದಿರುವ ಕಿಡಿಗೇಡಿಗಳು, ಸುಮಾರು 25 ಸಾವಿರ ರೂಪಾಯಿ ನಗದನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಹೊಸನಗರ ಪೊಲೀಸ್ ವೃತ್ತನಿರೀಕ್ಷಕರಾದ ಗೌಡಪ್ಪ ಗೌಡ ಹಾಗೂ ಸಬ್ ಇನ್ಸ್ಪೆಕ್ಟರ್ ಶಂಕರ್ ಗೌಡ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಕೂಡ ಸ್ಥಳಕ್ಕೆ ಧಾವಿಸಿ ಮಾಹಿತಿ ಕಲೆಹಾಕಿದ್ದಾರೆ. ದೇವಸ್ಥಾನ ಸಮಿತಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಬರಹ: Chetandas Hosamane

Leave a Comment