ಸಾಗರ: ಗರ್ಭಿಣಿ ಬಲಿತೆಗೆದುಕೊಂಡ ವಿಷಸರ್ಪ; ಕಂಗಾಲಾದ ಕುಟುಂಬಕ್ಕೆ ಆಸರೆಯಾದ ಶಾಸಕರು

​ಸಾಗರ: ತಾಲೂಕಿನ ಆನಂದಪುರ ಹೋಬಳಿಯ ಸುಳುಗೋಡು ಗ್ರಾಮದಲ್ಲಿ ಆರು ತಿಂಗಳ ಗರ್ಭಿಣಿಯೊಬ್ಬರು ಹಾವು ಕಚ್ಚಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಸುಳುಗೋಡು ಗ್ರಾಮದ ನಿವಾಸಿ ವೀರಭದ್ರ ಅವರ ಪತ್ನಿ ಶಿಲ್ಪಾ (26) ಮೃತಪಟ್ಟ ದುರ್ದೈವಿ. ಪ್ರೀತಿಸಿ ಮದುವೆಯಾಗಿದ್ದ ಈ ದಂಪತಿಗಳು ಮೂರು ವರ್ಷಗಳ ನಂತರ ಮಗುವಿನ ನಿರೀಕ್ಷೆಯಲ್ಲಿದ್ದರು. ಕಡು ಬಡತನದ ನಡುವೆಯೂ ಕೂಲಿ ಕೆಲಸ ಮುಗಿಸಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಶಿಲ್ಪಾ ಅವರಿಗೆ ವಿಷಕಾರಿ ನಾಗರಹಾವು ಕಚ್ಚಿದೆ. ತಕ್ಷಣ ಅವರನ್ನು ಆನಂದಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಶಿಲ್ಪಾ ಮೃತಪಟ್ಟಿದ್ದಾರೆ. ಈ ಘಟನೆಯಿಂದಾಗಿ ಶಿಲ್ಪಾ ಹಾಗೂ ಅವರ ಗರ್ಭದಲ್ಲಿದ್ದ ಆರು ತಿಂಗಳ ಶಿಶು ಎರಡೂ ಪ್ರಾಣ ಪಕ್ಷಿಗಳು ಹಾರಿಹೋಗಿವೆ.

​ವಿಷಯ ತಿಳಿಯುತ್ತಿದ್ದಂತೆಯೇ ಸಾಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಪತ್ನಿಯನ್ನು ಕಳೆದುಕೊಂಡು ಕಂಗಾಲಾಗಿದ್ದ ವೀರಭದ್ರ ಅವರಿಗೆ ಧೈರ್ಯ ತುಂಬಿದ ಶಾಸಕರು, ವೈಯಕ್ತಿಕವಾಗಿ ಧನಸಹಾಯ ಮಾಡಿದರು. ಅಲ್ಲದೆ, ಹಾವು ಕಚ್ಚಿ ಮೃತಪಟ್ಟವರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ವಿಳಂಬ ಮಾಡದೆ ತಕ್ಷಣವೇ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳಿಕ ಮಾತನಾಡಿದ ಶಾಸಕರು, “ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ಕಚ್ಚಿದವರಿಗೆ ಸೂಕ್ತ ಚಿಕಿತ್ಸೆ ಲಭ್ಯವಿದೆ. ಆದರೆ ಆಂಬ್ಯುಲೆನ್ಸ್ ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿ ಕೊರತೆಯಿಂದಾಗಿ ಇಂತಹ ಅನಾಹುತಗಳು ಸಂಭವಿಸುತ್ತಿವೆ. ಹಾವು ಕಚ್ಚಿದ ತಕ್ಷಣ ಸಾರ್ವಜನಿಕರು ಆತಂಕಪಡದೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಬೇಕು” ಎಂದು ಮನವಿ ಮಾಡಿದರು.

​ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಗಜೇಂದ್ರ ಯಾದವ್, ಉಮೇಶ್ ಎನ್., ಅಶ್ವಿನ್, ವೀರಭದ್ರಪ್ಪ, ಹರೀಶ್ ಗೌಡ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.

ಬರಹ: Chetandas Hosamane

Leave a Comment