ಶೃಂಗೇರಿ ರಾಜಕೀಯದಲ್ಲಿ ಹೈಡ್ರಾಮಾ: ಟಿ.ಡಿ. ರಾಜೇಗೌಡಗೆ ಸುಪ್ರೀಂ ರಿಲೀಫ್, ಮತ್ತೆ ಶಾಸಕಗಿರಿ ಭಾಗ್ಯ!

Photo of author

By vishwachetana807@gmail.com

​ಶೃಂಗೇರಿ: ಕಳೆದ ಕೆಲವು ದಿನಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ವಿವಾದ ಇದೀಗ ರೋಚಕ ತಿರುವು ಪಡೆದುಕೊಂಡಿದೆ. ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡುವ ಮೂಲಕ ಅವರನ್ನೇ ಶಾಸಕ ಸ್ಥಾನದಲ್ಲಿ ಮುಂದುವರಿಸುವಂತೆ ಸೂಚನೆ ನೀಡಿದೆ.

ಕಳೆದ ಚುನಾವಣೆಯಲ್ಲಿ ಅಂಚೆ ಮತಗಳ ಎಣಿಕೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿ ಬಿಜೆಪಿಯ ಡಿ.ಎನ್. ಜೀವರಾಜ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಹೈಕೋರ್ಟ್ ನೀಡಿದ್ದ ಮರು ಎಣಿಕೆ ಆದೇಶದ ಅನ್ವಯ, ಜೀವರಾಜ್ ಅವರು ಮುನ್ನಡೆ ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಜೀವರಾಜ್ ಅವರನ್ನು ವಿಜಯಿ ಎಂದು ಘೋಷಿಸಿ ಪ್ರಮಾಣಪತ್ರ ನೀಡಿತ್ತು. ಕೇವಲ ನಾಲ್ಕು ದಿನಗಳ ಹಿಂದಷ್ಟೇ ಜೀವರಾಜ್ ಅವರು ಶಾಸಕರಾಗಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದರು.

ಹೈಕೋರ್ಟ್ ಆದೇಶ ಹಾಗೂ ಮರು ಎಣಿಕೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಟಿ.ಡಿ. ರಾಜೇಗೌಡ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ಪೀಠವು, ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಅಲ್ಲದೆ, ಅಂಚೆ ಮತಗಳ ಎಣಿಕೆಯ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ.

ಮುಂದೇನು?
•  ಸುಪ್ರೀಂ ಕೋರ್ಟ್ ಆದೇಶದಂತೆ ಟಿ.ಡಿ. ರಾಜೇಗೌಡ ಅವರೇ ಶೃಂಗೇರಿ ಕ್ಷೇತ್ರದ ಶಾಸಕರಾಗಿ ಮುಂದುವರಿಯಲಿದ್ದಾರೆ.
• ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 21ಕ್ಕೆ ಮುಂದೂಡಲಾಗಿದ್ದು, ಅಂದು ಸುಪ್ರೀಂ ಕೋರ್ಟ್ ನೀಡುವ ತೀರ್ಪು ಕ್ಷೇತ್ರದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.
• ಅಲ್ಪ ಅವಧಿಗೆ ಶಾಸಕ ಸ್ಥಾನದ ದೃಢೀಕರಣ ಪತ್ರ ಪಡೆದಿದ್ದ ಡಿ.ಎನ್. ಜೀವರಾಜ್ ಅವರಿಗೆ ಈ ತಡೆ ಆದೇಶವು ಸದ್ಯಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.

ಒಟ್ಟಾರೆಯಾಗಿ, ಶೃಂಗೇರಿಯ ಈ ಅಂಚೆ ಮತಗಳ ‘ಕದನ’ ಇದೀಗ ದಿಲ್ಲಿಯ ಅಂಗಳದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಮೇ 21ರಂದು ಅಂತಿಮವಾಗಿ ಯಾರ ಕೈ ಮೇಲಾಗಲಿದೆ ಎಂಬುದು ಕಾದು ನೋಡಬೇಕಿದೆ.

ಬರಹ: Chetandas Hosamane

Leave a Comment