
ಶಿವಮೊಗ್ಗ: ಜಿಲ್ಲೆಯ ಸವಳಂಗ ರಸ್ತೆಯ ಕೊಮ್ಮನಾಳು ತಿರುವಿನ ಬಳಿ ಖಾಸಗಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಹಳೇ ಜೋಗದ ನಿವಾಸಿ ಶಿವಕುಮಾರ್ (32) ಮೃತಪಟ್ಟ ದುರ್ದೈವಿ. ಶಿವಕುಮಾರ್ ಅವರು ನಿನ್ನೆ ರಾತ್ರಿ ಸುಮಾರು 9:30 ರ ಸಮಯದಲ್ಲಿ ಶಿವಮೊಗ್ಗದಿಂದ ಹಳೇ ಜೋಗದಲ್ಲಿರುವ ತಮ್ಮ ಮನೆಗೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಕೊಮ್ಮನಾಳು ತಿರುವಿನ ಬಳಿ ಹೊನ್ನಾಳಿಯಿಂದ ಶಿವಮೊಗ್ಗದ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಹಾಗೂ ಶಿವಕುಮಾರ್ ಅವರ ಬೈಕ್ ನಡುವೆ ಜೋರಾಗಿ ಡಿಕ್ಕಿಯಾಗಿದೆ.


ಅಪಘಾತದ ತೀವ್ರತೆಗೆ ಬೈಕ್ ಸವಾರ ಶಿವಕುಮಾರ್ ರಸ್ತೆಗೆ ಎಸೆಯಲ್ಪಟ್ಟು, ಗಂಭೀರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತ ನಡೆದ ಕೂಡಲೇ ಸ್ಥಳೀಯರು ಧಾವಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ತಕ್ಷಣ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ರಾಘವೇಂದ್ರ ಕಾಂಡಿಕೆ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಈ ಅಪಘಾತದಿಂದಾಗಿ ಸವಳಂಗ ರಸ್ತೆಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಅತಿಯಾದ ವೇಗ ಅಥವಾ ತಿರುವಿನಲ್ಲಿ ಸರಿಯಾದ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬರಹ: Chetandas Hosamane









