
ರಿಪ್ಪನ್ಪೇಟೆ: ಸ್ಥಳೀಯ ಶಿವಮೊಗ್ಗ ರಸ್ತೆಯಿಂದ ಪೊಲೀಸ್ ಕ್ವಾರ್ಟರ್ಸ್ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಂಕ್ರೀಟ್ ಕಾಮಗಾರಿ ವಿಳಂಬ ಹಾಗೂ ಕಳಪೆ ನಿರ್ವಹಣೆಯನ್ನು ಖಂಡಿಸಿ, ರಿಪ್ಪನ್ಪೇಟೆಯ ಪ್ರಮುಖ ಸಾಮಾಜಿಕ ಹೋರಾಟಗಾರರಾದ ಟಿ.ಆರ್. ಕೃಷ್ಣಪ್ಪ ಅವರು ರಸ್ತೆಗಿಳಿದು ಏಕಾಂಗಿಯಾಗಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಕಾಮಗಾರಿ ನಡೆಸಲು ಬಂದಿದ್ದ ಜೆಸಿಬಿ ಯಂತ್ರವನ್ನು ಸ್ವತಃ ತಾವೊಬ್ಬರೇ ತಡೆದು ನಿಲ್ಲಿಸಿದ ಟಿ.ಆರ್. ಕೃಷ್ಣಪ್ಪ, ಸ್ಥಳದಲ್ಲೇ ಧರಣಿ ಕೂತು ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


ಅವರು ಬಿಡುಗಡೆ ಮಾಡಿರುವ ಅಧಿಕೃತ ದಾಖಲೆಗಳ ಪ್ರಕಾರ, ಈ ರಸ್ತೆ ನಿರ್ಮಾಣಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (MGNREGA) ಯೋಜನೆಯಡಿ 2019ರಲ್ಲೇ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ದೊರೆತಿತ್ತು. ಆದರೆ ವರ್ಷಗಳು ಕಳೆದರೂ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದ್ದು, ಇಷ್ಟು ದಿನಗಳ ಕಾಲ ಅನುದಾನ ಏನಾಯಿತು ಎಂದು ಅವರು ಸಾರ್ವಜನಿಕವಾಗಿ ಪ್ರಶ್ನಿಸಿದ್ದಾರೆ. ಮೊದಲು ಉತ್ತಮ ಸ್ಥಿತಿಯಲ್ಲೇ ಇದ್ದ ರಸ್ತೆಯನ್ನು ಹೊಸದಾಗಿ ಕಾಂಕ್ರೀಟೀಕರಣ ಮಾಡುತ್ತೇವೆ ಎಂಬ ನೆಪದಲ್ಲಿ ಜೆಸಿಬಿ ಮೂಲಕ ಅಗೆದು ಹಾಕಿ ಇಡೀ ರಸ್ತೆಯನ್ನು ಹಾಳು ಮಾಡಲಾಗಿದೆ ಎಂದು ಟಿ.ಆರ್. ಕೃಷ್ಣಪ್ಪ ತೀವ್ರವಾಗಿ ಆರೋಪಿಸಿದ್ದಾರೆ. ಅಗೆದ ಬಳಿಕ ಕಾಮಗಾರಿಯನ್ನು ಮುಂದುವರಿಸದೆ ಹಾಗೆಯೇ ಬಿಟ್ಟಿರುವುದರಿಂದ ಇಡೀ ರಸ್ತೆ ಧೂಳು ಮತ್ತು ಕಲ್ಲುಗಳಿಂದ ತುಂಬಿ ಹೋಗಿದ್ದು, ಇದರಿಂದಾಗಿ ಈ ಭಾಗದಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಹಾಗೂ ಹಿರಿಯ ನಾಗರಿಕರು ನಿತ್ಯ ಸಂಕಟ ಪಡುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕಾಮಗಾರಿಗೆ ಸಂಬಂಧಿಸಿದ 2019ರ ಮಂಜೂರಾತಿ ಪತ್ರ ಹಾಗೂ ಇತರೆ ಸರ್ಕಾರಿ ದಾಖಲೆಗಳನ್ನು ಸ್ಥಳದಲ್ಲೇ ಮಾಧ್ಯಮಗಳ ಮುಂದೆ ಪ್ರದರ್ಶಿಸಿದ ಸಾಮಾಜಿಕ ಹೋರಾಟಗಾರ ಟಿ.ಆರ್. ಕೃಷ್ಣಪ್ಪ, ವರ್ಷಗಳ ಹಿಂದೆ ಬಿಡುಗಡೆಯಾದ ಅನುದಾನದ ಹಣ ಎಲ್ಲಿದೆ, ಇಷ್ಟು ದಿನಗಳ ಕಾಲ ಈ ಯೋಜನೆಯನ್ನು ಏಕೆ ನನೆಗುದಿಗೆ ಹಾಕಲಾಗಿತ್ತು ಮತ್ತು ಈಗ ಏಕಾಏಕಿ ಬಂದು ಅರ್ಧಂಬರ್ಧ ಕೆಲಸ ಮಾಡಲು ಹೊರಟಿರುವುದರ ಹಿಂದೆ ಯಾವ ಹಿತಾಸಕ್ತಿಯಿದೆ ಎಂದು ನೇರ ಪ್ರಶ್ನೆ ಹಾಕಿದ್ದಾರೆ. ಕೇವಲ ಹೆಸರಿಗಷ್ಟೇ ರಸ್ತೆ ಮಾಡುವುದು ಬೇಡ, ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್ಗಳು ಸ್ಥಳಕ್ಕೆ ಬಂದು ಈ ರಸ್ತೆಯ ಗುಣಮಟ್ಟದ ಕುರಿತು ಲಿಖಿತ ಭರವಸೆ ನೀಡಬೇಕು, ಕಾಮಗಾರಿ ಸಂಪೂರ್ಣ ಗುಣಮಟ್ಟದಿಂದ ಕೂಡಿರಬೇಕು ಮತ್ತು ನಿಗದಿತ ಅವಧಿಯಲ್ಲಿ ಮುಗಿಯಬೇಕು, ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಇಲ್ಲಿ ಕೆಲಸ ಮಾಡಲು ಬಿಡುವುದಿಲ್ಲ ಮತ್ತು ತಾವು ನಡೆಸುತ್ತಿರುವ ಈ ಧರಣಿ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಕೃಷ್ಣಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸ್ಥಳದಲ್ಲಿ ಜೆಸಿಬಿ ಮುಂದೆ ಅವರು ಒಬ್ಬರೇ ಕುಳಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಸಾರ್ವಜನಿಕರಲ್ಲೂ ಆಡಳಿತ ವ್ಯವಸ್ಥೆಯ ವಿರುದ್ಧ ಅಸಮಾಧಾನ ಮೂಡಿಸಿದೆ.
ಬರಹ: Chetandas Hosamane









