
ಹೊಸನಗರ: ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಮಾರ್ಗ ನಿರ್ಮಾಣದ ವಿಸ್ತೃತ ಯೋಜನಾ ವರದಿಯಲ್ಲಿ (DPR) ಹೊಸನಗರವನ್ನು ಕಡ್ಡಾಯವಾಗಿ ಸೇರಿಸಬೇಕು ಎಂದು ಹೊಸನಗರ ವರ್ತಕರ ಸಂಘವು ತೀವ್ರ ಒತ್ತಾಯ ಹೇರಿದೆ.
ಸುಮಾರು 3300 ಕೋಟಿ ರೂ. ವೆಚ್ಚದ ಈ ಯೋಜನೆಗೆ ಡಿಪಿಆರ್ ತಯಾರಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. 2018ರಲ್ಲಿ ಸಚಿವರಾಗಿದ್ದ ಡಿ.ವಿ. ಸದಾನಂದಗೌಡರು ನೀಡಿದ್ದ ಭರವಸೆಯಂತೆ ಹೊಸನಗರವನ್ನು ಈ ಯೋಜನೆಯಲ್ಲಿ ಸೇರಿಸಬೇಕು. ಆದರೆ ಪ್ರಸ್ತುತ ಅರಸಾಳು-ರಿಪ್ಪನ್ಪೇಟೆ-ತೀರ್ಥಹಳ್ಳಿ ಮೂಲಕ ಮಾರ್ಗ ನಿರ್ಮಿಸುವ ಚರ್ಚೆ ನಡೆಯುತ್ತಿದ್ದು, ಇದರಿಂದ ಹೊಸನಗರಕ್ಕೆ ಅನ್ಯಾಯವಾಗಲಿದೆ ಎಂದು ಸಂಘ ಕಳವಳ ವ್ಯಕ್ತಪಡಿಸಿದೆ.

”ನಾಡಿನ ಜನತೆಗೆ ಬೆಳಕು ನೀಡಲು ಸರ್ವಸ್ವವನ್ನೂ ಕಳೆದುಕೊಂಡ ತ್ಯಾಗಮಯಿ ತಾಲೂಕು ಹೊಸನಗರ. ಈ ತ್ಯಾಗವನ್ನು ಮರೆತು ನಮ್ಮನ್ನು ಕಡೆಗಣಿಸುವ ಪ್ರಯತ್ನವನ್ನು ನಾವು ಖಂಡಿತಾ ಸಹಿಸುವುದಿಲ್ಲ. ಉದ್ದೇಶಿತ ರೈಲು ಮಾರ್ಗವು ಅರಸಾಳು, ರಿಪ್ಪನ್ಪೇಟೆ, ಹೊಸನಗರ, ತೀರ್ಥಹಳ್ಳಿ ಮೂಲಕವೇ ಹಾದುಹೋಗುವಂತೆ ಡಿಪಿಆರ್ ಸಿದ್ಧಪಡಿಸಿ, ದಶಕಗಳಿಂದ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು” ಎಂದು ಹೊಸನಗರ ವರ್ತಕರ ಸಂಘದ (ರಿ.) ಅಧ್ಯಕ್ಷರಾದ ಪೂರ್ಣೇಶ್ ಮಲೆಬೈಲು ಅವರು ಮನವಿ ಮಾಡಿದ್ದಾರೆ.
ಬರಹ: ಚೇತನ್ ದಾಸ್ ಹೊಸಮನೆ









