
ಹೊಸನಗರ: ಕೇಂದ್ರ ಸರ್ಕಾರದ ‘ಪಿಎಂ ಶ್ರೀ’ (PM SHRI) ಯೋಜನೆಯಡಿ ಪ್ರಾಥಮಿಕ ಶಾಲೆಗಳಲ್ಲಿಯೇ ೮ನೇ ತರಗತಿಯನ್ನು ಆರಂಭಿಸುವ ಸರ್ಕಾರದ ಹೊಸ ಆದೇಶವು ತಾಲೂಕಿನಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಸಮೀಪದಲ್ಲೇ ಸುಸಜ್ಜಿತ ಪ್ರೌಢಶಾಲೆಗಳಿದ್ದರೂ, ೭ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ (TC) ನೀಡದೆ ಪ್ರಾಥಮಿಕ ಶಾಲೆಯಲ್ಲೇ ಉಳಿಸಿಕೊಳ್ಳುವ ಸರ್ಕಾರದ ಈ ನಡೆಯನ್ನು ಹೊಸನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್ಡಿಎಂಸಿ ಅಧ್ಯಕ್ಷರಾದ ಅಶ್ವಿನಿ ಕುಮಾರ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಹೊಸನಗರ ತಾಲೂಕಿನ ಜಯನಗರದ ಮೇಲಿನ ಬೇಸಿಗೆ ಪ್ರಾಥಮಿಕ ಶಾಲೆ ಹಾಗೂ ಶಾಸಕರ ಮಾದರಿ ಶಾಲೆಗಳನ್ನು ‘ಪಿಎಂ ಶ್ರೀ’ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಇಲ್ಲಿ ಎಲ್ಕೆಜಿ (LKG) ಯಿಂದ ೮ನೇ ತರಗತಿಯವರೆಗೆ ಶಿಕ್ಷಣ ನೀಡಲು ಸರ್ಕಾರ ಆದೇಶಿಸಿದೆ. ಆದರೆ, ಕೇವಲ ೧೦೦ ಮೀಟರ್ ಅಂತರದಲ್ಲಿ ಪ್ರೌಢಶಾಲೆಗಳಿರುವಾಗ, ಪ್ರಾಥಮಿಕ ಶಾಲೆಯಲ್ಲಿಯೇ ಹೊಸದಾಗಿ ೮ನೇ ತರಗತಿ ನಿರ್ಮಾಣ ಮಾಡುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ. ಅಚ್ಚರಿಯ ವಿಚಾರವೆಂದರೆ, ೭ನೇ ತರಗತಿ ಮುಗಿಸಿದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಪೋಷಕರು ಮುಂದಾಗಿ ಅಲ್ಲಿಂದ ಟಿಸಿಗೆ (TC) ಅರ್ಜಿ ಬಂದರೆ ತಕ್ಷಣವೇ ಟಿಸಿ ನೀಡಲಾಗುತ್ತಿದೆ. ಆದರೆ, ಪಕ್ಕದಲ್ಲೇ ಇರುವ ಸರ್ಕಾರಿ ಪ್ರೌಢಶಾಲೆಯಿಂದ ಅರ್ಜಿ ಬಂದು ಟಿಸಿ ಕೇಳಿದರೆ ಮಾತ್ರ ನೀಡಲು ನಿರಾಕರಿಸಲಾಗುತ್ತಿದೆ ಎಂದು ಸರ್ಕಾರದ ಈ ದ್ವಂದ್ವ ನೀತಿ ಮತ್ತು ತಾರತಮ್ಯವನ್ನು ಅವರು ಬಲವಾಗಿ ಪ್ರಶ್ನಿಸಿದ್ದಾರೆ.

ಜಯನಗರದಂತಹ ಪ್ರಾಥಮಿಕ ಶಾಲೆಗಳಲ್ಲಿ ಪ್ರಸ್ತುತ ಕೇವಲ ೨೦ ರಿಂದ ೨೨ ರಷ್ಟು ಮಕ್ಕಳಿದ್ದಾರೆ. ಈ ಫೀಡಿಂಗ್ ಶಾಲೆಗಳ ಮಕ್ಕಳೇ ಪ್ರೌಢಶಾಲೆಗಳಿಗೆ ಆಧಾರ. ಇವರನ್ನು ೮ನೇ ತರಗತಿಗೂ ಪ್ರಾಥಮಿಕ ಶಾಲೆಯಲ್ಲೇ ಉಳಿಸಿಕೊಂಡರೆ, ಮುಂದೊಂದು ದಿನ ಪ್ರೌಢಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಶಾಶ್ವತವಾಗಿ ಮುಚ್ಚುವ ಹಂತಕ್ಕೆ ತಲುಪಲಿವೆ. ಅಲ್ಲದೆ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಪದ್ಧತಿ ಮತ್ತು ಮಕ್ಕಳ ಮಾನಸಿಕತೆಯ ನಡುವೆ ದೊಡ್ಡ ವ್ಯತ್ಯಾಸವಿರುತ್ತದೆ. ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರೌಢಶಾಲೆಯ ವಾತಾವರಣವೇ ಸೂಕ್ತ. ಅವರನ್ನು ಮತ್ತೆ ಪ್ರಾಥಮಿಕ ಶಾಲೆಯಲ್ಲೇ ಉಳಿಸಿಕೊಂಡರೆ, ೯ ಮತ್ತು ೧೦ನೇ ತರಗತಿಗೆ ಹಠಾತ್ತನೆ ಪ್ರೌಢಶಾಲೆಗೆ ಬಂದಾಗ ಅವರು ಶೈಕ್ಷಣಿಕವಾಗಿ ಹೊಂದಿಕೊಳ್ಳಲು ಹಾಗೂ ಬೋರ್ಡ್ ಪರೀಕ್ಷೆಗಳನ್ನು ಎದುರಿಸಲು ಕಷ್ಟಪಡಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಶ್ವಿನಿ ಕುಮಾರ್, “ಮಕ್ಕಳನ್ನು ಪ್ರಯೋಗದ ವಸ್ತುವಾಗಿಸಿ ಅಧಿಕಾರಿಗಳು ಹುಚ್ಚುಚ್ಚಾಗಿ ವರ್ತಿಸುತ್ತಿದ್ದಾರೆ. ನಮ್ಮ ಮಕ್ಕಳು ಮಂಗ, ಇಲಿ, ಹೆಗ್ಗಣಗಳಲ್ಲ. ಅಧಿಕಾರಿಗಳಿಗೆ ತಲೆಕೆಟ್ಟಿದ್ದರೆ ಆಸ್ಪತ್ರೆಗೆ ಸೇರಿಸಬೇಕು” ಎಂದು ಗುಡುಗಿದ್ದಾರೆ. ಸರ್ಕಾರ ಈ ಕೂಡಲೇ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಮತ್ತು ೭ನೇ ತರಗತಿ ಉತ್ತೀರ್ಣರಾದ ಕೂಡಲೇ ಮಕ್ಕಳನ್ನು ಕಡ್ಡಾಯವಾಗಿ ಹತ್ತಿರದ ಪ್ರೌಢಶಾಲೆಗಳಿಗೆ ಸೇರಿಸಲು ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ರೂಪಿಸುವುದರ ಜೊತೆಗೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಬರಹ: ಚೇತನ್ ದಾಸ್ ಹೊಸಮನೆ









