ಹೊಸನಗರ: ಹುಲಿಕಲ್ ಘಾಟಿ ಸಮೀಪ ತಾಂತ್ರಿಕ ದೋಷದಿಂದ ಹೊತ್ತಿ ಉರಿದ ಖಾಸಗಿ ಬಸ್; ತಪ್ಪಿದ ಭಾರಿ ಅನಾಹುತ

Photo of author

By vishwachetana807@gmail.com

ಹೊಸನಗರ: ತಾಲೂಕಿನ ಹುಲಿಕಲ್ ಘಾಟಿ ಸಮೀಪ ಶನಿವಾರ ಬೆಳಿಗ್ಗೆ ಖಾಸಗಿ ಬಸ್ಸೊಂದು ತಾಂತ್ರಿಕ ದೋಷದಿಂದ ಬೆಂಕಿಗಾಹುತಿಯಾಗಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸಾಗರ-ಹೊಸನಗರ ಮಾರ್ಗವಾಗಿ ಉಡುಪಿಗೆ ಈ ಬಸ್ ತೆರಳುತ್ತಿತ್ತು. ಹುಲಿಕಲ್ ಘಾಟಿ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಬಸ್ಸು ಹುಲಿಕಲ್ ಘಾಟಿ ದೇವಸ್ಥಾನದ ಸಮೀಪ ತನ್ನಲ್ಲಿದ್ದ ಪ್ರಯಾಣಿಕರನ್ನು ಅದೇ ಸಂಸ್ಥೆಯ ಮತ್ತೊಂದು ಬಸ್ಸಿಗೆ ವರ್ಗಾಯಿಸಿತ್ತು. ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿ ಅಲ್ಲಿಂದ ಉಡುಪಿಯ ಕಡೆಗೆ ತೆರಳುವ ಮಾರ್ಗಮಧ್ಯೆ ಈ ಅಗ್ನಿ ಅವಘಡ ಸಂಭವಿಸಿದೆ. ಪ್ರಯಾಣಿಕರು ಬಸ್ಸಿನಲ್ಲಿ ಇಲ್ಲದ ಕಾರಣ ಭಾರೀ ಪ್ರಾಣಾಪಾಯವೊಂದು ತಪ್ಪಿದಂತಾಗಿದೆ.

ಬೆಂಕಿ ಹೊತ್ತಿಕೊಳ್ಳಲು ನಿಖರವಾದ ತಾಂತ್ರಿಕ ದೋಷವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಈ ಘಟನೆಯು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಬರಹ: ಚೇತನ್ ದಾಸ್ ಹೊಸಮನೆ

Leave a Comment