“ಬಿಜೆಪಿಯವರದ್ದು ಕೇವಲ ಬೋಗಸ್ ಹಿಂದುತ್ವ, ನಾವೂ ಹಿಂದೂಗಳೇ” ಎಂದು ವಾಗ್ದಾಳಿ.

ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಾಗರ-ಹೊಸನಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ತಮ್ಮ ನಾಯಕರು ಸಿಎಂ ಆಗಿರುವುದು ತೀವ್ರ ಸಂತಸ ತಂದಿದೆ ಎಂದು ಹೇಳಿದ್ದಾರೆ. ಅಲ್ಲದೆ, ಡಿ.ಕೆ. ಶಿವಕುಮಾರ್ ಅವರಿಗಾಗಿ ತಮ್ಮ ಸ್ಥಾನವನ್ನು ತ್ಯಾಗ ಮಾಡಲೂ ಸಿದ್ಧ ಎಂದು ಘೋಷಿಸುವ ಮೂಲಕ ತಮ್ಮ ನಿಷ್ಠೆಯನ್ನು ಪ್ರದರ್ಶಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಮ್ಮ ರಾಜ್ಯದ ನಾಯಕರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ವಿಧಾನಸೌಧ ಪ್ರವೇಶಿಸುತ್ತಿರುವುದು ನಮಗೆಲ್ಲರಿಗೂ ಅತ್ಯಂತ ಖುಷಿಯ ವಿಚಾರ. ಮುಂಬರುವ ದಿನಗಳಲ್ಲಿ ನಮ್ಮ ಈಡಿಗ ಸಮಾಜಕ್ಕೆ ಮತ್ತು ನಮಗೆ ಸೂಕ್ತ ಸ್ಥಾನಮಾನ ಸಿಗುವ ವಿಶ್ವಾಸವಿದೆ. ಅವಕಾಶ ಕೇಳಿದ್ದೇವೆ, ಕೊಟ್ಟರೆ ಸಂತೋಷ, ಇಲ್ಲದಿದ್ದರೂ ಬೇಸರವಿಲ್ಲ” ಎಂದರು.
“ಹಿಂದೆ ಬಿಜೆಪಿಯಿಂದ ನಮ್ಮನ್ನು ಹೊರಹಾಕಿದಾಗ ನಮಗೆ ಆಶ್ರಯ ನೀಡಿದ್ದು ಇದೇ ಡಿ.ಕೆ. ಶಿವಕುಮಾರ್ ಸಾಹೇಬರು. ಹೀಗಾಗಿ, ಅವರು ಸೂಚಿಸಿದರೆ ಅವರಿಗಾಗಿ ನನ್ನ ಸ್ಥಾನವನ್ನು ಬಿಟ್ಟುಕೊಡಲು, ತ್ಯಾಗ ಮಾಡಲು ನಾನು ಖಂಡಿತಾ ಸಿದ್ಧನಿದ್ದೇನೆ. ನಮಗೆ ಆಶೀರ್ವಾದ ಮಾಡಿ ಸಹಕಾರ ಕೊಟ್ಟವರೇ ಅವರು, ಹೀಗಾಗಿ ಅವರ ಹಿಂದೆಯೇ ನಾವಿರುತ್ತೇವೆ,” ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಬಿಜೆಪಿಯ ಹಿಂದುತ್ವದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಬೇಳೂರು ಗೋಪಾಲಕೃಷ್ಣ, “ಬಿಜೆಪಿಯವರದ್ದು ಕೇವಲ ತೋರಿಕೆಯ ಮತ್ತು ಬೋಗಸ್ ಹಿಂದುತ್ವ. ನಾವೇನು ಬೇರೆ ಗ್ರಹದಿಂದ ಬಂದಿಲ್ಲ, ನಾವು ಕೂಡ ಹಿಂದೂಗಳೇ. ನಾವೂ ಪ್ರತಿದಿನ ದೇವಸ್ಥಾನಗಳಿಗೆ ಹೋಗುತ್ತೇವೆ, ಪೂಜೆ ಮಾಡುತ್ತೇವೆ. ಆದರೆ ನಮ್ಮ ಕಾಂಗ್ರೆಸ್ ಪಕ್ಷ ಸರ್ವಧರ್ಮಗಳನ್ನು ಗೌರವಿಸುವ ನಿಜವಾದ ಹಿಂದುತ್ವವನ್ನು ಪಾಲಿಸುತ್ತದೆ. ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಸ್ಲಿಮರನ್ನು ವಿರೋಧಿಸಿ ಹಿಂದುತ್ವದ ಹೆಸರು ಹೇಳುವುದು ಸರಿಯಲ್ಲ,” ಎಂದು ಕಿಡಿಕಾರಿದರು.
“ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲೂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿಯೇ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬರಹ: ಚೇತನ್ ದಾಸ್ ಹೊಸಮನೆ









